ಕೊಯಿಕ್ಕೋಡ್ :ಕೇರಳದ ಕೊಯಿಕ್ಕೋಡ್ನಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಲಾ 10 ಲಕ್ಷ ರೂ. ಮಧ್ಯಂತರ ಪರಿಹಾರ ಘೋಷಣೆ ಮಾಡಿದ್ದಾರೆ.
ಇಂದು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಸಚಿವ ಹರ್ದೀಪ್ ಸಿಂಗ್, ಇದು 10 ವರ್ಷಗಳ ಹಿಂದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ದುರಂತವನ್ನು ನೆನಪಿಸಿದೆ. ಆದರೆ, ಇಲ್ಲಿ ಮುನ್ನೆಚ್ಚರಿಕಾ ಕ್ರಮಗಳಿಂದಾಗಿ ಪ್ರಾಣಹಾನಿ ಕಡಿಮೆಯಾಗಿದೆ ಎಂದು ಹೇಳಿದರು.
ಕೊಯಿಕ್ಕೋಡ್ಗೆ ಸಚಿವ ಹರ್ದೀಪ್ ಸಿಂಗ್ ಭೇಟಿ ಇದೇ ವೇಳೆ ಮಧ್ಯಂತರ ಪರಿಹಾರವಾಗಿ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ, ಗಂಭೀರವಾಗಿ ಗಾಯಗೊಂಡವರಿಗೆ 2 ಲಕ್ಷ ರೂ. ಹಾಗೂ ಸಣ್ಣಪುಟ್ಟ ಗಾಯಗಳಾದವರಿಗೆ 50 ಸಾವಿರ ರೂ. ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ವಂದೇ ಭಾರತ್ ಮಿಷನ್ ಅಡಿಯಲ್ಲಿ ನಿನ್ನೆ ದುಬೈನಿಂದ ಕೇರಳಕ್ಕೆ ಬಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೊಯಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್ವೇನಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿದಂತೆ 19 ಮಂದಿ ಮೃತಪಟ್ಟಿದ್ದು, ನೂರಾರು ಪ್ರಯಾಣಿಕರು ಗಾಯಗೊಂಡಿದ್ದಾರೆ.