ಅಮರಾವತಿ : ಆಂಧ್ರ ವಿಧಾನಸಭೆಯಲ್ಲಿ ರೈತರಿಗೆ ಸೌಲಭ್ಯ ವಿತರಿಸುವ ವಿಚಾರದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ಜಟಾಪಟಿ ನಡೆಯಿತು.
ರೈತರಿಗೆ ನಮ್ಮ ಸರ್ಕಾರ ಬಡ್ಡಿ ರಹಿತ ಸಾಲ ನೀಡಿದೆ. ಟಿಡಿಪಿ ಸರ್ಕಾರದ ಅವಧಿಯಲ್ಲಿ ಇಂತಹ ಯೋಜನೆಗಳು ಕಾರ್ಯರೂಪಕ್ಕೆ ಬಂದಿರಲಿಲ್ಲ ಎಂದು ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಹೇಳಿದ್ದರು.
ಅಲ್ಲದೇ ನಿನ್ನೆ ಸರ್ಕಾರ ಬಿಡುಗಡೆ ಮಾಡಿದ ಶ್ವೇತಪತ್ರದಲ್ಲಿ ಟಿಡಿಪಿ ಸರ್ಕಾರದ ಅವಧಿಯಲ್ಲಿ ಭಾರಿ ಸಾಲ ಪಡೆಯಲಾಗಿದೆ. ಇದು ಪ್ರಸ್ತುತ ಆಡಳಿತದಲ್ಲಿ ಅಮರಾವತಿಯ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ಆರೋಪ ಮಾಡಲಾಗಿತ್ತು.
ಈ ಆರೋಪಕ್ಕೆ ವಿರೋಧ ವ್ಯಕ್ತಪಡಿಸಿದ್ದ ಚಂದ್ರಬಾಬು ನಾಯ್ಡು ಟಿಡಿಪಿ ಸರ್ಕಾರದ ಅವಧಿಯಲ್ಲಿ ಕೈಗೊಂಡ ಕ್ರಮಗಳನ್ನು ಸಮರ್ಥಿಸಿಕೊಂಡಿದ್ದರು. ಮತ್ತು ಈ ಬಗ್ಗೆ ಸದನದಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದರು.
ಇಂದು ಸದನದಲ್ಲಿ ಮುಖ್ಯಮಂತ್ರಿ ಮಾತು ಆರಂಭಿಸುತ್ತಿದ್ದಂತೆ ಬಡ್ಡಿರಹಿತ ಸಾಲ ವಿತರಿಸುವ ವಿಚಾರದಲ್ಲಿ ಜಗನ್ ಮೋಹನ್ ರೆಡ್ಡಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ, ಎಂದು ಆರೋಪಿಸಿ ವಿರೋಧ ಪಕ್ಷ ಕಲಾಪದಲ್ಲಿ ಗದ್ದಲ ಎಬ್ಬಿಸಿತು
ಮುಖ್ಯಮಂತ್ರಿ ಪ್ರಶ್ನೆಗಳಿಗೆ ಉತ್ತರಿಸಲು ಅಣಿಯಾಗುತ್ತಿದ್ದಂತೆ ಅಡ್ಡಿಪಡಿಸಿದ ವಿರೋಧ ಪಕ್ಷ ತೆಲುಗು ದೇಶಂ ಪಾರ್ಟಿ (ಟಿಡಿಪಿ) ಯ ನಾಯಕ ಚಂದ್ರಬಾಬು ನಾಯ್ಡು, ತಮ್ಮ ಮೇಲಿನ ಆರೋಪವನ್ನು ಸಂಬಂಧಪಟ್ಟಂತೆ ಮುಖ್ಯಮಂತ್ರಿ ರಾಜೀನಾಮೆ ನೀಡುತ್ತೀರಾ? ಎಂದು ಜಗನ್ ಮೋಹನ್ ರೆಡ್ಡಿ ಅವರನ್ನ ಪ್ರಶ್ನಿಸಿದರು. ಇದೇ ವಿಷಯವಾಗಿ ಹಕ್ಕುಚ್ಯುತಿ ಮಂಡನೆಗೆ ಮುಂದಾಯಿತು. ಈ ವೇಳೆ ಟಿಡಿಪಿ ಶಾಸಕರು ಮುಖ್ಯಮಂತ್ರಿ ಭಾಷಣಕ್ಕೆ ಅಡ್ಡಿಪಡಿಸಲು ಪ್ರಾರಂಭಿಸಿದರು. ಇದೇ ವಿಷಯವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿ ನಡೆಯಿತು. ಒಂದು ಹಂತದಲ್ಲಿ ಸಿಎಂ ತಮ್ಮ ತಾಳ್ಮೆಯನ್ನೂ ಕಳೆದುಕೊಂಡರು. ಇದೆಲ್ಲದರಿಂದಾಗಿ ಕಲಾಪ ಬಲಿಯಾಯಿತು.