ಬಸಿರ್ಹತ್(ಪಶ್ಚಿಮ ಬಂಗಾಳ):ಸಿಎಎ ಮತ್ತು ಎನ್ಆರ್ಸಿಯನ್ನ ವಿರೋಧಿಸುತ್ತಿರುವ ಬುದ್ಧಿಜೀವಿಗಳೆಲ್ಲ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಿಗಳು ಎಂದು ಬಿಜೆಪಿ ಸಂಸದ ಸೌಮಿತ್ರ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಬಿಶ್ನುಪುರ್ ಕ್ಷೇತ್ರದ ಸಂಸದ ಸೌಮಿತ್ರ ಖಾನ್ ಭಾನುವಾರ ಬಸಿರ್ಹತ್ನಲ್ಲಿ ಸಾರ್ವಜನಿಕರನ್ನ ಉದ್ದೇಶಿಸಿ ಮಾತನಾಡಿ, ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಹಣ ಪಡೆದುಕೊಂಡಿರುವ ಬುದ್ಧಿಜೀವಿಗಳು ಸಿಎಎ ಮತ್ತು ಎನ್ಆರ್ಸಿಗೆ ಬೆಂಬಲ ನೀಡುತ್ತಿಲ್ಲ. ಅವರೆಲ್ಲ ಟಿಎಂಸಿ ಪಕ್ಷದ ನಾಯಿಗಳು ಎಂದಿದ್ದಾರೆ.
ಈ ಹಿಂದೆ ಟಿಎಂಸಿ ಪಕ್ಷದಲ್ಲಿದ್ದ ಸೌಮಿತ್ರ ಖಾನ್ 2019ರ ಲೋಕಸಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಸೇರಿಕೊಂಡಿದ್ದರು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಿಎಎ ಮತ್ತು ಎನ್ಆರ್ಸಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದು, ಇವೆರಡನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲು ಬಿಡುವುದಿಲ್ಲ ಎಂದಿದ್ದಾರೆ.
ಇದಕ್ಕೂ ಮೊದಲು ವಿವಾದಾತ್ಮಕ ಹೇಳಿಕೆ ನೀಡಿದ್ದ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲಿಪ್ ಘೋಷ್, ಸಿಎಎ ವಿರೋಧಿಸುವ ಬುದ್ಧಿಜೀವಿಗಳನ್ನ 'ಬೆನ್ನುಮೂಳೆ ಇಲ್ಲದವರು', 'ದೆವ್ವಗಳು', 'ಪರಾವಲಂಬಿಗಳು' ಎಂದು ಕರೆದಿದ್ದರು.