ಪಾಟ್ನಾ (ಬಿಹಾರ): ರಾಜ್ಯದಲ್ಲಿ ನಿರುದ್ಯೋಗದ ಜೊತೆಗೆ ಹಣದುಬ್ಬರವು ದೊಡ್ಡ ಸಮಸ್ಯೆಯಾಗಿದೆ, ಈರುಳ್ಳಿ ಬೆಲೆ ಗಗನಕ್ಕೆ ಏರುತ್ತಿದೆ ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಮುಖಂಡ ತೇಜಸ್ವಿ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಹಾರ ವಿಧಾನಸಭಾ ಚುನಾವಣಾ ಪ್ರಚಾರ ಬಿರುಸಾಗುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿತೀಶ್ ಕುಮಾರ್ ನೇತೃತ್ವದಲ್ಲಿ ರಾಜ್ಯದಲ್ಲಿ ಸುಮಾರು 30,000 ಕೋಟಿ ರೂ. ಮೌಲ್ಯದ 60 ಹಗರಣಗಳು ನಡೆದಿವೆ ಎಂದು ಆರೋಪಿಸಿದ್ದಾರೆ.
ಈರುಳ್ಳಿ ಬೆಲೆ ನೂರು ರೂಪಾಯಿ ಮುಟ್ಟಲಿದೆ. ಕೆ.ಜಿಗೆ 50 ರಿಂದ 60 ರೂಪಾಯಿ ಇದ್ದಾಗ ಅದರ ಬಗ್ಗೆ ಮಾತನಾಡುತ್ತಿದ್ದವರು ಈಗ ಕೆ.ಜಿಗೆ 80 ರೂಪಾಯಿ ತಲುಪಿದ್ದರೂ ಮಾತನಾಡುತ್ತಿಲ್ಲ. ಸದ್ಯ ರಾಜ್ಯದಲ್ಲಿ ಹಸಿವು ಹಾಗೂ ಬಡತನ ಹೆಚ್ಚುತ್ತಿದೆ ಎಂದು ತೇಜಸ್ವಿ ಯಾದವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ರಾಜ್ಯದಲ್ಲಿ ನಿರುದ್ಯೋಗವಿದೆ. ಸಣ್ಣ ವ್ಯಾಪಾರಿಗಳು ನಾಶವಾಗಿದ್ದಾರೆ. ಜಿಡಿಪಿ ಕುಸಿಯುತ್ತಿದ್ದು, ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದ್ದೇವೆ. ಜನರು ಶಿಕ್ಷಣ, ಉದ್ಯೋಗ ಮತ್ತು ವೈದ್ಯಕೀಯ ಸೌಲಭ್ಯಗಳಿಗೆ ವಲಸೆ ಹೋಗುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದರ ಜೊತೆಗೆ ರಾಜ್ಯದಲ್ಲಿ ಭ್ರಷ್ಟಾಚಾರ ಗಣನೀಯವಾಗಿ ಹೆಚ್ಚಾಗಿದೆ. ಲಂಚವಿಲ್ಲದೇ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಲಂಚ ನೀಡದೇ ಬಿಹಾರದಲ್ಲಿ ಒಂದೇ ಒಂದು ಕೆಲಸವನ್ನೂ ಮಾಡಲಾಗದ ಪರಿಸ್ಥಿತಿ ಇದೆ ಎಂದು ತೇಜಸ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.