ಮಹಬೂಬ್ನಗರ್(ತೆಲಂಗಾಣ):ಬಾಲನಗರ ತಾಲೂಕು ಕೇಂದ್ರದಲ್ಲಿ 30 ದಿನಗಳ ಕಾಲ ನೈರ್ಮಲ್ಯ ಕಾರ್ಯಕ್ರಮ ಕೈಗೊಳ್ಳಲಾಗಿತ್ತು. ಸ್ವಚ್ಛತಾ ಕಾರ್ಯದಲ್ಲಿ ಚರಂಡಿಯಲ್ಲಿರುವ ಕಸ ಬಗೆದಂತೆಲ್ಲ ನವಜಾತ ಶಿಶುಗಳ ಕಳೆಬರಹಗಳು ದೊರೆತಿದ್ದು, ಇದು ತೆಲಂಗಾಣ ರಾಜ್ಯವನ್ನು ಬೆಚ್ಚಿಬೀಳಿಸಿದೆ.
ಇಲ್ಲಿನ ತಹಶಿಲ್ದಾರ್ ಕಾರ್ಯಾಲಯಕ್ಕೆ ತೆರಳುವ ಮಾರ್ಗ ಮಧ್ಯೆ ಚರಂಡಿವೊಂದಿದೆ. ಕಳೆದ ಆರು ತಿಂಗಳಿನಿಂದ ಆ ಚರಂಡಿಯ ಸ್ವಚ್ಛತೆ ಕೈಗೊಂಡಿರಲಿಲ್ಲ. ಶನಿವಾರ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜೆಸಿಬಿಯಿಂದ ಚರಂಡಿ ಸ್ವಚ್ಛಗೊಳಿಸುತ್ತಿದ್ದ ವೇಳೆ ಬಗೆದಂತೆಲ್ಲ ಕಸದ ಜೊತೆ ಸುಮಾರು 10 ನವಜಾತು ಶಿಶುಗಳ ಕಳೆಬರಹಗಳು ದೊರೆತಿವೆ.
‘ಮಹಬೂಬ್ನಗರ್ ಜಿಲ್ಲೆಯ ಬಾಲನಗರ್ ತಾಲೂಕಿನಲ್ಲಿ ತಾಂಡಗಳು ಹೆಚ್ಚಾಗಿವೆ. ಆದ್ರೆ ಸುತ್ತಮುತ್ತ ಹಳ್ಳಿ ಮತ್ತು ತಾಂಡಗಳಲ್ಲಿ ಸ್ಕ್ಯಾನಿಂಗ್ ಕೇಂದ್ರಗಳು ಇಲ್ಲ. ಬೇರೆ ಪ್ರದೇಶಕ್ಕೆ ತೆರಳಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಾರೆ. ಹೆಣ್ಣು ಶಿಶುವಾದಲ್ಲಿ ಬಾಲನಗರ್ನ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಆಶ್ರಯ ಪಡೆದು ಗರ್ಭಪಾತ ಮಾಡಿಸಿಕೊಳ್ಳುತ್ತಾರೆ. ಇವರಲ್ಲದೇ ಪ್ರೇಮದ ಪ್ರೀತಿ-ಪ್ರೇಮದ ಸುಳಿಯಲ್ಲಿ ಸಿಲುಕಿ ಮೋಸ ಹೋದವರು ಸಹ ಗರ್ಭಪಾತ ಮಾಡಿಸಿರಬಹುದು. ಈ ಹಿಂದೆ ಬಾಲನಗರ್ನ ಪ್ರಾಥಮಿಕ ಚಿಕಿತ್ಸೆ ಕೇಂದ್ರದಲ್ಲಿ ಗರ್ಭಪಾತ ನಡೆಯುತ್ತಿದೆ ಎಂದು ಕೆಲ ಸಂಘಟನೆಯವರು ಆರೋಪಿಸಿ ಪ್ರತಿಭಟನೆ ಕೈಗೊಂಡಿದ್ದರು. ಈಗ ದೊರೆತಿರುವ ನವಜಾತು ಶಿಶುಗಳ ಕಳೆಬರಹಕ್ಕೂ ಮತ್ತು ಪ್ರಾಥಮಿಕ ಚಿಕಿತ್ಸಾ ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಗರ್ಭಪಾತಕ್ಕೂ ಸಂಬಂಧವಿದೆಯಾ ಎಂಬುದನ್ನು ತಿಳಿಯಬೇಕಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಘಟನೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಪಿಎಂಪಿ, ಮೆಡಿಕಲ್ ಶಾಪ್, ಖಾಸಗಿ ಆಸ್ಪತ್ರೆ ವೈದ್ಯರಿಗೆ ನೋಟಿಸ್ ನೀಡುವುದಾಗಿ ತಾಲೂಕು ವೈದ್ಯಾಧಿಕಾರಿ ಡಾ.ತುಳಸಿ ಮಾಹಿತಿ ನೀಡಿದ್ದಾರೆ.