ಅಂಬಾಲಾ (ಹರಿಯಾಣ):ಕಳೆದ ಜುಲೈ ತಿಂಗಳಲ್ಲಿ ಫ್ರಾನ್ಸ್ನಿಂದ ಭಾರತಕ್ಕೆ ಬಂದಿದ್ದ ಐದು ರಫೇಲ್ ಯುದ್ಧ ವಿಮಾನಗಳು ಇಂದು ಅಧಿಕೃತವಾಗಿ ವಾಯುಸೇನೆ ಸೇರ್ಪಡೆಗೊಂಡಿವೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎದುರಾಳಿ ಚೀನಾ, ಪಾಕಿಸ್ತಾನಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.
ಗಡಿಯಲ್ಲಿ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡಿರುವ ಇಂತಹ ಸಂದರ್ಭದಲ್ಲಿ ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನ ಸೇರ್ಪಡೆಗೊಳ್ಳುತ್ತಿರುವುದು ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು. ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ಐದು ರಫೇಲ್ ಯುದ್ಧ ವಿಮಾನಗಳು ಭಾರತೀಯ ಸೇನೆಗೆ ಸೇರಿಕೊಂಡಿದ್ದು, ಈ ವೇಳೆ ಮಾತನಾಡಿರುವ ರಾಜನಾಥ್ ಸಿಂಗ್, ಗಡಿ ಭಾಗದಲ್ಲಿ ಸದ್ಯ ಕಠಿಣ ಪರಿಸ್ಥಿತಿ ನಿರ್ಮಾಣಗೊಂಡಿದೆ. ಇಂತಹ ಸಂದರ್ಭಗಳಲ್ಲಿ ರಫೇಲ್ ಯುದ್ಧ ವಿಮಾನ ಸೇರ್ಪಡೆಗೊಂಡಿರುವುದು ಅತ್ಯಂತ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರದ ಭದ್ರತೆ, ದೇಶದ ಗಡಿ ರಕ್ಷಣೆಗೆ ಭಾರತ ಸದಾ ಸಿದ್ಧ ಹಾಗೂ ಬದ್ಧವಾಗಿದೆ. ನಮ್ಮ ಸಾರ್ವಭೌಮತೆಗೆ ಧಕ್ಕೆ ತರುವ ದುಸ್ಸಾಹಸ ಮಾಡುತ್ತಿರುವ ನೆರೆಯ ರಾಷ್ಟ್ರಗಳಿಗೆ ಇದೀಗ ನಾವು ಸ್ಪಷ್ಟ ಸಂದೇಶ ರವಾನೆ ಮಾಡಿದ್ದೇವೆ. ಕಳೆದ ಕೆಲ ದಿನಗಳ ಹಿಂದೆ ರಷ್ಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಭಾರತದ ದೃಷ್ಠಿಕೋನ, ನಿಲುವು ಜಗತ್ತಿನ ಮುಂದೆ ಸಾರಿದ್ದೇವೆ ಎಂದಿದ್ದಾರೆ.