ಕರ್ನಾಟಕ

karnataka

ETV Bharat / bharat

ವಿಶೇಷ ಅಂಕಣ.. ಚೀನಾ ಇಷ್ಟರಮಟ್ಟಿಗೆ ಭಾರತದೊಳಗೆ ನುಸುಳಿದೆ, ಇಲ್ನೋಡಿ.. - ಲೈನ್‌ ಆಫ್‌ ಆಕ್ಚುಯಲ್‌ ಕಂಟ್ರೋಲ್

ಗಾಲ್ವನ್‌ ಕಣಿವೆಯಲ್ಲಿ ಇತ್ತೀಚೆಗೆ ನಡೆದ ನೇರಾನೇರ ಹೊಡೆದಾಟದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಮಧ್ಯೆ, ಲಡಾಖ್‌ನ ಪೂರ್ವದ ಗಾಲ್ವನ್‌ ಕಣಿವೆಯ ಮೇಲೆ ಚೀನಾ ತನ್ನ ಹಕ್ಕನ್ನು ಮತ್ತೆ ಪ್ರತಿಪಾದಿಸಿದೆ..

Shrouding calamities
ವಾಸ್ತವ ನಿಯಂತ್ರಣ ರೇಖೆ

By

Published : Jun 20, 2020, 3:51 PM IST

ಹೈದರಾಬಾದ್ :ಹಿಮಾಲಯ ಪ್ರದೇಶದಲ್ಲಿ ಭಾರತದೊಂದಿಗೆ ಗಡಿ ವಿವಾದಗಳನ್ನು ಹೊಂದಿದ್ದಲ್ಲದೇ ಇತ್ತೀಚೆಗೆ ಲಡಾಖ್‌ನಲ್ಲಿಯೂ ಒಳನುಸುಳಿದೆ ಚೀನಾ. ಪ್ಯಾಂಗಾಂಗ್‌ ತ್ಸೊ, ಡೆಮ್‌ಚೊಕ್‌, ಗಲ್ವಾನ್‌ ಕಣಿವೆ ಮತ್ತು ದೌಲತ್‌ ಬೇಗ್‌ ಒಲ್ಡಿಯಲ್ಲಿ ಚೀನಿ ಸೈನಿಕರು ವಾಸ್ತವ ನಿಯಂತ್ರಣ ರೇಖೆ ದಾಟಿ ಬಂದಿರುವುದರಿಂದ ಎರಡೂ ದೇಶಗಳ ನಡುವೆ ಪ್ರಕ್ಷ್ಯುಬ್ಧ ಪರಿಸ್ಥಿತಿ ಉಲ್ಬಣಿಸಿದೆ.

ಗಾಲ್ವನ್‌ ಕಣಿವೆಯಲ್ಲಿ ಇತ್ತೀಚೆಗೆ ನಡೆದ ನೇರಾನೇರ ಹೊಡೆದಾಟದಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದಾರೆ. ಈ ಮಧ್ಯೆ ಲಡಾಖ್‌ನ ಪೂರ್ವದ ಗಾಲ್ವನ್‌ ಕಣಿವೆಯ ಮೇಲೆ ಚೀನಾ ತನ್ನ ಹಕ್ಕನ್ನು ಮತ್ತೆ ಪ್ರತಿಪಾದಿಸಿದೆ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ– ಲೈನ್‌ ಆಫ್‌ ಆಕ್ಚುಯಲ್‌ ಕಂಟ್ರೋಲ್‌) ಎಂಬುದು 3,440 ಕಿ.ಮೀ ಉದ್ದದ ಅಸ್ಪಷ್ಟ ಗುರುತಿನ ರೇಖೆಯಾಗಿದೆ. ಭಾರತದ ಹತೋಟಿಯಲ್ಲಿರುವ ಪ್ರದೇಶವನ್ನು ಚೀನಾದ ಹತೋಟಿಯಲ್ಲಿರುವ ಪ್ರದೇಶದಿಂದ ಪ್ರತ್ಯೇಕಿಸುತ್ತದೆ. ಹಲವಾರು ಪ್ರದೇಶಗಳಲ್ಲಿ ಎಲ್‌ಎಸಿ ಪರಸ್ಪರ ಹೆಣೆದುಕೊಂಡಂತೆ ಇರುವುದರಿಂದ, ಗಡಿ ಅಕ್ರಮದ ಆರೋಪಗಳಲ್ಲಿ ತೊಡಗಿದೆ ಚೀನಾ. ಪದೇಪದೆ ಕೈ ಮಿಲಾಯಿಸುವುದು ಮತ್ತು ನೇರಾನೇರ ಹೊಡೆದಾಟ ಇಲ್ಲಿನ ಸಾಮಾನ್ಯ ದೃಶ್ಯ. ಇಡೀ ಎಲ್‌ಎಸಿ ಒಟ್ಟು ಮೂರು ವಲಯಗಳಲ್ಲಿ ಪಶ್ಚಿಮ, ಪೂರ್ವ ಮತ್ತು ಮಧ್ಯ ಎಂದು ವಿಭಾಗವಾಗಿವೆ.

ಪಶ್ಚಿಮ ವಲಯ (ಕರಾಕೋರಮ್‌ ಕಣಿವೆಯ ವಾಯವ್ಯ ಭಾಗದಿಂದ ಡೆಮ್‌ಚೊಕ್‌ವರೆಗೆ, 1,570 ಕಿಮೀ). 1950ರ ದಶಕದಿಂದಲೂ ಭಾರತ ಮತ್ತು ಚೀನಾ ನಡುವೆ ಅಕ್ಸಾಯ್‌ ಚಿನ್‌ ತೀವ್ರ ವಿವಾದಾಸ್ಪದ ಗಡಿ ಪ್ರದೇಶವಾಗಿದೆ. ಇದು ಅಂದಾಜು 38,000 ಚದರ ಕಿಮೀ ವಿಸ್ತಾರದ ಪ್ರದೇಶ. 1957ರಲ್ಲಿ ಚೀನಾ ಈ ಪ್ರದೇಶವನ್ನು ಆಕ್ರಮಿಸಿತು. ಆದರೆ, ಈ ಆಕ್ರಮಿತ ಪ್ರದೇಶ ತನಗೆ ಸೇರಿರುವ ಲಡಾಖ್‌ ಪ್ರಾಂತ್ಯದ ಭಾಗ ಎಂದು ಭಾರತ ಪ್ರತಿಪಾದಿಸುತ್ತಿದೆ.1962ರಲ್ಲಿ ಟಿಬೇಟ್‌ ಮತ್ತು ಕಿನ್ಜಿಯಾಂಗ್‌ ಪ್ರದೇಶಗಳನ್ನು ಸಂಪರ್ಕಿಸುವ ರಸ್ತೆಯನ್ನು ಅಕ್ಸಾಯ್‌ ಚಿನ್‌ ಮಧ್ಯದಲ್ಲಿ ನಿರ್ಮಿಸಿತು ಚೀನಾ.

ಡೆಮ್‌ಚೊಕ್‌ ಒಂದು ಹಳ್ಳಿ ಮತ್ತು ಸೈನಿಕ ಶಿಬಿರ ತಾಣವಾಗಿದೆ. ಭಾರತ ಮತ್ತು ಚೀನಾದ ನಡುವಿನ ವಿವಾದಾತ್ಮಕ ಡೆಮ್‌ಚೊಕ್‌ ಪ್ರದೇಶದಲ್ಲಿದೆ. ಭಾರತ ತನ್ನದೆಂದು ಹೇಳಿಕೊಳ್ಳುತ್ತಿರುವ ಗಡಿಯು ಡೆಮ್‌ಚೊಕ್‌ನ ಆಗ್ನೇಯ ಭಾಗದಲ್ಲಿದೆ. ಭಾರತ ಮತ್ತು ಚೀನಾದ ಸೈನಿಕರು ನಿಯಮಿತವಾಗಿ ನೇರ ಹೊಡೆದಾಟ ನಡೆಸುವುದು ಇಲ್ಲಿಯೇ..

ಪೂರ್ವ ವಲಯ (ಸಿಕ್ಕಿಂನಿಂದ ಮಯನ್ಮಾರ್‌ ಗಡಿಯವರೆಗೆ, 1,325 ಕಿಮೀ). ಅತ್ಯಂತ ವಿವಾದಾತ್ಮಕ ಭೂಪ್ರದೇಶಗಳೆಲ್ಲವೂ ಅರುಣಾಚಲ ಪ್ರದೇಶದಲ್ಲಿವೆ. ಆದರೆ, ಅರುಣಾಚಲ ಪ್ರದೇಶವೂ ತನ್ನ ಪ್ರದೇಶದ ಒಂದು ಭಾಗವೆಂದು ಚೀನಾ ದಶಕಗಳಿಂದ ಪ್ರತಿಪಾದಿಸುತ್ತ ಬಂದಿದೆ. ಮೇಲ್ಭಾಗದ ಸುಬನಸಿರಿ ವಿಭಾಗದಲ್ಲಿರುವ ಅಸಾಫಿಲಾ 100 ಚದರ ಕಿಮೀ ವ್ಯಾಪ್ತಿಯ ಅರಣ್ಯ ಮತ್ತು ಗುಡ್ಡಗಾಡು ಪ್ರದೇಶ.

1962ರ ಚೀನಾ-ಭಾರತ ಯುದ್ಧದಲ್ಲಿ ಈ ಪ್ರದೇಶ ಚೀನಾದ ನೇರ ದಾಳಿಗೆ ಒಳಗಾಗಿತ್ತು. ಪ್ರಸ್ತುತ ಈ ಪ್ರದೇಶವು ಯಾವ ದೇಶದ ವ್ಯಾಪ್ತಿಯಲ್ಲಿಯೂ ಇಲ್ಲ. ಮೇಲ್ಭಾಗದ ಸುಬನಸಿರಿ ವಲಯದಲ್ಲಿರುವ ಲೊಂಗ್ಜು, ಚೀನಾದ ಸೈನಿಕ ಠಾಣ್ಯಗಳಿರುವ ಟಿಬೇಟ್‌ನ ಮಿಜಿಯಿತುಮ್‌ನ ಎದುರಿಗಿದೆ. 1959ರಲ್ಲಿ ಚೀನಾದ ಪೀಪಲ್ಸ್‌ ಲಿಬರೇಶನ್‌ ಆರ್ಮಿ (ಪಿಎಲ್‌ಎ) ಮತ್ತು ಭಾರತದ ಅಸ್ಸಾಮ್‌ ರೈಫಲ್ಸ್‌ ನಡುವೆ ಮೊದಲ ಸಶಸ್ತ್ರ ಹೋರಾಟ ಇಲ್ಲಿ ನಡೆದಿತ್ತು. ಆನಂತರ ಭಾರತ ಲೊಂಗ್ಜುವನ್ನು ಮತ್ತೆ ಆಕ್ರಮಿಸಿಕೊಳ್ಳಲಿಲ್ಲ. ಆದರೆ, ಲೊಂಗ್ಜುನಿಂದ ದಕ್ಷಿಣಕ್ಕೆ 10 ಕಿ.ಮೀ ದೂರದ ಮಾಜಾದಲ್ಲಿ ಠಾಣ್ಯವೊಂದನ್ನು ನಿರ್ಮಿಸಿತು. ನಮ್ಕಾ ಚು ನದಿ ಕಣಿವೆಯು ತವಾಂಗ್‌ಗಿಂತ 60 ಕಿ.ಮೀ ಮುಂಚೆ ಬರುತ್ತದೆ.

1962ರ ಯುದ್ಧ ಪ್ರಾರಂಭವಾಗಿದ್ದೇ ಇಲ್ಲಿಂದ. ತವಾಂಗ್‌ ಜಿಲ್ಲೆಯ ಕ್ಯಾ ಫೋ ಪ್ರದೇಶದಲ್ಲಿರುವ ನಮ್ಕಾ ಚು ಪ್ರದೇಶದ ಪೂರ್ವಕ್ಕಿದೆ ಕಿರು ಹೊಳೆಯಾಗಿರುವ ಸುಮ್ದೊರೊಂಗ್. ಚೀನಾ ಸೈನ್ಯ ಇದನ್ನು 1986ರಲ್ಲಿ ಆಕ್ರಮಿಸಿಕೊಂಡಿತು. ಚೀನಾದ ಈ ಆಕ್ರಮಣಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಯಾಂಗ್‌ಸ್ತೆಯನ್ನು (ತವಾಂಗ್‌ ಜಿಲ್ಲೆಯ ಭಾಗ) 1986ರ ದ್ವಿತೀಯಾರ್ಧದಲ್ಲಿ ಆಕ್ರಮಿಸಿಕೊಂಡಿತು.

ಮಧ್ಯ ವಲಯವು (ಡೆಮ್‌ಚೊಕ್‌ನಿಂದ ನೇಪಾಳದ ಗಡಿಯವರೆಗೆ, 545 ಕಿಮೀ) ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಉದ್ಧಕ್ಕೂ ಹರಡಿಕೊಂಡಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಈ ಪ್ರದೇಶವು ಹುಲ್ಲುಗಾವಲು ಪ್ರದೇಶವನ್ನು ಒಳಗೊಂಡಿದೆ. ಈ ಪ್ರದೇಶ ಸಹ ಚೀನೀಯರ ದಾಳಿಗಳ ಇತಿಹಾಸವನ್ನು ಹೊಂದಿರುವಂಥದು.

ಪ್ಯಾಂಗಾಂಗ್‌ ತ್ಸೊ ಅಥವಾ ಪ್ಯಾಂಗಾಂಗ್‌ ಸರೋವರವು ಹಿಮಾಲಯದಲ್ಲಿದೆ. ಇದು 135 ಕಿ.ಮೀ ಉದ್ದವಾಗಿದ್ದು, ಭಾರತದಿಂದ ಚೀನಾದ ಟಿಬೇಟ್‌ ಸ್ವಾಯತ್ತ ಪ್ರದೇಶದವರೆಗೆ ಹರಡಿದೆ. ಲೇಹ್‌ನಿಂದ 54 ಕಿ.ಮೀ ದೂರದಲ್ಲಿದೆ. 1962ರ ಯುದ್ಧದಲ್ಲಿ ಈ ಪ್ರಶಾಂತ ಸರೋವರದಿಂದ ಚೀನಾ ತನ್ನ ಪ್ರಮುಖ ದಾಳಿಯನ್ನು ಪ್ರಾರಂಭಿಸಿತ್ತು. ಪ್ಯಾಂಗಾಂಗ್‌ ತ್ಸೊದ ಪೂರ್ವದ ಕೊನೆಯಲ್ಲಿ ಚೀನಾ ತನ್ನ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಿದೆ. ಒಂದು ವೇಳೆ ಭಾರತದೊಂದಿಗೆ ಯುದ್ಧ ನಡೆದ್ರೆ, ಈ ಸರೋವರವು ಚೀನಾದ ಪಾಲಿಗೆ ಪ್ರಮುಖ ಆಯಕಟ್ಟಿನ ಸ್ಥಳವೆನಿಸುತ್ತದೆ.

ಗಾಲ್ವನ್‌ ನದಿಯು ವಿವಾದಿತ ಅಕ್ಸಾಯ್‌ ಚಿನ್‌ ಪ್ರದೇಶದಿಂದ ಭಾರತದ ಲಡಾಖ್‌ ಕಡೆ ಹರಿಯುತ್ತದೆ. 1962ರ ಯುದ್ಧದಲ್ಲಿ ಭಾರತ ಮತ್ತು ಚೀನಿ ಸೈನಿಕರ ನಡುವಿನ ಪ್ರಮುಖ ಘರ್ಷಣೆಯ ಸ್ಥಳಗಳ ಪೈಕಿ ಗಾಲ್ವನ್‌ ಕಣಿವೆಯೂ ಒಂದಾಗಿತ್ತು. ಕಾಶ್ಮೀರಿ ಮೂಲದ ಲಡಾಖ್‌ನ ಪ್ರಖ್ಯಾತ ಶೋಧಕ ಗುಲಾಮ್‌ ರಸೂಲ್‌ ಗಾಲ್ವನ್‌ ಹೆಸರನ್ನು ಈ ನದಿಗೆ ಇಡಲಾಗಿದೆ. ಅಕ್ಸಾಯ್‌ ಚಿನ್‌ ಪ್ರಸ್ಥಭೂಮಿಯ ಮೇಲಿನ ತನ್ನ ಹಕ್ಕುದಾರಿಕೆಯನ್ನು ಭಾರತ ಪ್ರತಿಪಾದಿಸುತ್ತಿರುವಾಗಲೇ, ಗಾಲ್ವನ್‌ ನದಿಯ ಪಶ್ಚಿಮ ಭಾಗದ ಮೇಲೆ ತನ್ನ ಹಕ್ಕಿನ ಪ್ರತಿಪಾದನೆಯಲ್ಲಿ ಚೀನಾ ಸಾಕಷ್ಟು ಮುನ್ನಡೆ ಸಾಧಿಸಿದೆ.

ಲಡಾಖ್‌ನಲ್ಲಿ ಸ್ಥಾಪನೆಯಾಗಿರುವ ಒಂದು ಸೈನಿಕ ನೆಲೆ ದೌಲತ್‌ ಬೇಗ್‌ ಓಲ್ಡಿ. ಅಕ್ಸಾಯ್‌ ಚಿನ್‌ನ ಈಶಾನ್ಯಕ್ಕೆ ಕೇವಲ 9 ಕಿ.ಮೀ ದೂರದಲ್ಲಿದೆ ಇದು. ಭಾರತೀಯ ವಾಯುಪಡೆಯು 43 ವರ್ಷಗಳ ಅಂತರದ ನಂತರ 2008ರಲ್ಲಿ ಇಲ್ಲಿ ತನ್ನ ಸರಕು ಸಾಗಣೆ ವಿಮಾನಗಳನ್ನು ಇಳಿಸಿತು. 1962ರ ಯುದ್ಧಾನಂತರ ಇದು ಕೂಡಾ ವಿವಾದಾತ್ಮಕ ಪ್ರದೇಶವಾಗಿ ಪರಿಣಮಿಸಿದೆ.

ಗಡಿಯೊಳಗೆ ನುಗ್ಗುವ ನಡೆಯ ಹಿಂದೆ ಚೀನಾದ ಸಾಮ್ರಾಜ್ಯವಾದಿ ಮಹತ್ವಕಾಂಕ್ಷೆಗಳಿರುವುದು ಸ್ಪಷ್ಟ. ಪೂರ್ವ ಲಡಾಖ್‌ನ ಮೇಲೆ ತನ್ನ ಹಕ್ಕುದಾರಿಕೆಯನ್ನು ಮುಂದುವರಿಸಿರುವ ಜೊತೆಗೆ, ಡೆನ್‌ಚೊಕ್‌-ಕುಯುಲ್‌ ವಲಯದ ದೊಡ್ಡ ಭಾಗದ ಮೇಲೆಯೂ ಚೀನಾ ಆಕ್ರಮಣ ಮಾಡಿದೆ. ಈ ಮುಂಚೆ ಲಡಾಖ್‌ನ ಗಡಿಯು ಕೆಗು ನರೋದಲ್ಲಿತ್ತು. ನಂತರ ಚೀನಿ ಪಡೆಗಳು ಕ್ರಮೇಣ ನಾಗಾತ್ಸಂಗ್‌ (1984), ನಾಕುಂಗ್‌ (1991), ಲಂಗ್ಮಾ ಸೆರ್ದಂಗ್‌ (1992) ಮತ್ತು ಸ್ಕಕ್‌ಜಂಗ್‌ (2008)ವರೆಗೂ ಮುಂದುವರಿದವು.

2000ದಲ್ಲಿ ತನ್ನ ಕ್ಸಿಂಜಿಯಾಂಗ್‌ ಪ್ರದೇಶದಲ್ಲಿರುವ ಅಕ್ಸಯ್‌ ಚಿನ್‌ನ ವಿವಾದಿತ ಪ್ರದೇಶದಿಂದ ಹರಿಯುವ ಚಿಪ್‌ ಚಾಪ್‌ ನದಿಯನ್ನು ಚೀನಾ ಆಕ್ರಮಿಸಿತು. 2013ರಲ್ಲಿ ಭಾರತಕ್ಕೆ ಮುಖ್ಯ ಭೂಭಾಗಕ್ಕೆ ಸೇರಿರುವ 19 ಕಿ.ಮೀ ಪ್ರದೇಶದವರೆಗೂ ಚೀನಾ ಒಳ ನುಗ್ಗಿತು. ಭಾರತದ ಹಿಂದಿನ ವಿದೇಶಾಂಗ ಸಚಿವ ಶ್ಯಾಮ್‌ ಚರಣ್‌ ಅವರು ಹೇಳುವಂತೆ, ಚೀನಾದ ಆಕ್ರಮಣದಿಂದ ಭಾರತ ಇದುವರೆಗೆ 640 ಚದರ ಕಿಮೀನಷ್ಟು ಪ್ರದೇಶವನ್ನು ಕಳೆದುಕೊಂಡಿದೆ.

ಭಾರತ-ಚೀನಾ ಗಡಿ ವಿವಾದಗಳು ಸುದೀರ್ಘ ಇತಿಹಾಸವನ್ನು ಹೊಂದಿದ್ದರೂ, ಇತ್ತೀಚಿನ ಉದ್ರಿಕ್ತ ಪರಿಸ್ಥಿತಿಯು ಹೊಸ ಬೆಳವಣಿಗೆಗಳ ಕಾರಣಗಳಿಂದಾಗಿ ಉದ್ಭವಿಸಿದೆ. ಚೀನಾದ ಆಕ್ರಮಣ ಪ್ರಯತ್ನಗಳನ್ನು ಹಿಮ್ಮೆಟ್ಟಿಸುವ ಉದ್ದೇಶದಿಂದ ಭಾರತ ತನ್ನ ಗಡಿ ಮೂಲಸೌಕರ್ಯಗಳನ್ನು ಹೆಚ್ಚಿಸಿಕೊಂಡಿತು. ದರ್ಬುಕ್‌-ಶಯೊಕ್-ದೌಲತ್‌ ಬೇಗ್‌ ಓಲ್ಡಿ ನಡುವೆ 255 ಕಿ.ಮೀ ಉದ್ದದ ರಸ್ತೆಯನ್ನು ನಿರ್ಮಿಸಿತು. ಈ ನಿರ್ಮಾಣದಿಂದ ಕೆರಳಿದ ಚೀನಾ, ಗಾಲ್ವನ್‌ ನಾಲಾದಲ್ಲಿದ್ದ ಭಾರತದ ಸೈನಿಕ ಠಾಣ್ಯಗಳು ಮತ್ತು ಸೇತುವೆಗಳನ್ನು ನಾಶಪಡಿಸಿತು.

ಭಾರತದ ಲಡಾಖ್‌ನನ್ನು ಕೇಂದ್ರಾಡಳಿತ ಪ್ರದೇಶವೆಂದು ಇತ್ತೀಚೆಗೆ ಘೋಷಿಸಲಾಗಿದೆ. ಈ ನಡೆಯನ್ನು ಟೀಕಿಸಿದ ಚೀನಾ, ಪೂರ್ವ ಲಡಾಖ್‌ನ ಮೇಲಿನ ತನ್ನ ಹಕ್ಕುದಾರಿಕೆಯನ್ನು ಮತ್ತೆ ಪ್ರತಿಪಾದಿಸಿತು. ಅಷ್ಟೇ ಅಲ್ಲ, ವಿಶ್ವ ಸಂಸ್ಥೆಯ ಭದ್ರತಾ ಸಮಿತಿಗೆ ದೂರು ನೀಡಿದ ಚೀನಾ, ಜಮ್ಮು-ಕಾಶ್ಮೀರದ ಪುನರ್‌ವಿಂಗಡಣೆ ಅಕ್ರಮ ಎಂದೂ ಆರೋಪಿಸಿತು.

ಚೀನಾ ದೇಶ ನೂತನ ಕೊರೊನಾ ವೈರಸ್‌ ಹಬ್ಬಿಸಿದೆ ಎಂದು ಹಲವಾರು ದೇಶಗಳು ಆರೋಪಿಸಿವೆ. ಕೋವಿಡ್‌-19 ವೈರಸ್‌ನ ಮೂಲ ಹುಡುಕುವಿಕೆಯಲ್ಲಿ ಅಮೆರಿಕವು ಭಾರತದ ನೆರವನ್ನು ಕೋರಿದೆ. ಇತರ ದೇಶಗಳೊಂದಿಗೆ ಭಾರತ ಸಖ್ಯ ಹೊಂದುವುದರ ವಿರುದ್ಧ ಎಚ್ಚರಿಕೆ ನೀಡುವುದಕ್ಕಾಗಿ ಚೀನಾ ದೇಶ ಗಡಿ ದಾಳಿಗಳನ್ನು ನಡೆಸುವ ಕೆಲಸಕ್ಕೆ ಇಳಿದಿದೆ. ಅದೇ ಸಮಯದಲ್ಲಿ ನೇಪಾಳವನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆ. ಭಾರತಕ್ಕೆ ಸೇರಿರುವ ಲಿಪುಲೇಖ್‌ ಮತ್ತು ಕಾಲಾಪಾನಿ ಪ್ರದೇಶಗಳನ್ನು ಒಳಗೊಂಡಿರುವ ಹೊಸ ರಾಜಕೀಯ ಭೂಪಟವನ್ನು ಅನಾವರಣಗೊಳಿಸುವಂತೆ ನೇಪಾಳವನ್ನು ಅದು ಒತ್ತಾಯಿಸಿದೆ.

ABOUT THE AUTHOR

...view details