ನವದೆಹಲಿ: ಒಡಿಶಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಾಪ್ಟರ್ ಪರಿಶೀಲಿಸಿ ಐಎಎಸ್ ಆಫೀಸರ್ ಅಮಾನತಾಗಿದ್ದರು. ಇದನ್ನೇ ಕಾಂಗ್ರೆಸ್ ಮೋದಿ ವಿರುದ್ಧ ರಾಜಕೀಯ ಅಸ್ತ್ರವಾಗಿಸಿತ್ತು. ಇಂದಿರಾ ಗಾಂಧಿ ಹಾಗೂ ಐಪಿಎಸ್ ಕಿರಣ್ ಬೇಡಿ ಜತೆ ಹೇಗೆ ನಡೆದುಕೊಂಡಿದ್ದರು ಅನ್ನೋ ಬಗ್ಗೆ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅಸಲಿಗೆ ಆ ಸಂಗತಿ ಏನು ಅನ್ನೋದನ್ನ ಕಿರಣ್ ಬೇಡಿ ಹೇಳಿಕೊಂಡಿದ್ದರು.
ಒಬ್ಬರು ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ. ಮತ್ತೊಬ್ಬರು ದೇಶದ ಮೊದಲ ಮಹಿಳಾ ಐಪಿಎಸ್ ಆಫೀಸರ್ ಕಿರಣ್ ಬೇಡಿ. ಔತಣ ಕೂಟದಲ್ಲಿ ಒಂದೇ ಟೇಬಲ್ ಮೇಲೆ ಕೂತಿರುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಫೋಟೊವನ್ನ ಸ್ವತಃ ಕಿರಣ್ ಬೇಡಿಯವರೇ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಆದರೆ, ಈ ಫೋಟೋವನ್ನೇ ಕಾಂಗ್ರೆಸ್ ಮೋದಿ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ.'IT& Social Media Cell Congress' ಎಂಬ ಫೇಸ್ಬುಕ್ ಪೇಜ್ ಹಾಗೂ ಇತರ ಎಫ್‌ಬಿ ಬಳಕೆದಾರರು ಈ ಫೋಟೋ ಹಂಚಿಕೊಂಡಿದ್ದರು. 'ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಂದಿರಾ ಗಾಂಧಿಯ ಕಾರನ್ನು ಕಿರಣ್ ಬೇಡಿ ತಡೆದಿದ್ದರು. ಆದರೂ ಪ್ರಧಾನಿ ಇಂದಿರಾ, ಕಿರಣ್ ಬೇಡಿಗೆ ಶಿಕ್ಷಿಸಿರಲಿಲ್ಲ, ಬದಲಿಗೆ ಧೈರ್ಯ ಕೊಂಡಾಡಿದ್ದರು. ಮನೆಗೆ ಕರೆದು ಔತಣ ನೀಡಿದ್ದರು. ಆದರೆ, ಪ್ರಧಾನಿ ಮೋದಿ ಕಾಪ್ಟರ್ ಸರ್ಚ್ ಮಾಡಿದ ಐಎಎಸ್ ಅಧಿಕಾರಿ ಸಸ್ಪೆಂಡ್ ಮಾಡ್ಲಾಯಿತು ಎಂದು ಕಾಂಗ್ರೆಸ್‌ಗೆ ಸೇರಿವೆ ಎನ್ನಲಾದ ಎಫ್‌ಬಿ ಪೇಜ್‌ಗಳಲ್ಲಿ ಬರೆದುಕೊಳ್ಳಲಾಗಿದೆ.
ಆದರೆ, ಕಿರಣ್ ಬೇಡಿಯೇ ಈ ಹಿಂದೆಯೇ ಈ ಫೋಟೋದ ಹಿಂದಿನ ಅಸಲಿ ಕಥೆ ಹೇಳಿಕೊಂಡಿದ್ದರು. 2015ರಲ್ಲಿ ಖಾಸಗಿ ಟಿವಿಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ 'ನಾನು ಇಂದಿರಾ ಗಾಂಧಿಯ ಕಾರನ್ನು ತಡೆದಿರಲಿಲ್ಲ. ಸಬ್ ಇನ್ಸ್‌ಪೆಕ್ಟರ್ ನಿರ್ಮಲಾ ಸಿಂಗ್ ಆ ಕೆಲಸ ಮಾಡಿದ್ದರು. ಅವರು ನನ್ನ ಕೆಳಗಿನ ಸಹೋದ್ಯೋಗಿಯಾಗಿದ್ದ ಕಾರಣ ಅವರ ರಕ್ಷಣೆಗೆ ನಿಂತಿದ್ದೆ. ಅದಕ್ಕಾಗಿ 7 ತಿಂಗಳ ವರ್ಗಾವಣೆಗೊಳಗಾಗಿದ್ದೆ ಅಂತಾ ಹೇಳಿದ್ದರು. ಈಗ ಹರಿದಾಡುತ್ತಿರುವ ಫೊಟೋ 1975ರ ಗಣರಾಜ್ಯೋತ್ಸವದ ದಿನ ಇಂದಿರಾ ಗಾಂಧಿಯವರ ಜತೆ ಕಿರಣ್ ಬೇಡಿ ಬೆಳಗ್ಗಿನ ತಿಂಡಿ ತಿನ್ನಲು ಕುಳಿತಿರುವುದು. ಕ್ರೇನ್ ಬಳಸಿ ಕಾರನ್ನು ಶಿಫ್ಟ್ ಮಾಡಿದ್ದ ಫೋಟೊ 1982 ಅಂದ್ರೇ 7 ವರ್ಷ ನಂತರ ತೆಗೆದಿರುವುದು. ಈ ಪೋಟೊಗೂ ಆ ಘಟನೆಗೂ ಯಾವುದೇ ಸಂಬಂಧವಿಲ್ಲ' ಎಂದು ಕಿರಣ ಬೇಡಿ ತಿಳಿಸಿದ್ದರು.
ಇಂದಿರಾ ಜತೆಗೆ ಕಳೆದ ಕ್ಷಣಗಳು ಅಪರೂಪ :
'ಇಂದಿರಾ ಗಾಂಧಿಯವರ ಜತೆಗೆ ಕಳೆದ ಆ ಕ್ಷಣಗಳು ತುಂಬಾ ಅಪರೂಪ. ನಾನು ಆಗ ಅವರನ್ನ ತುಂಬಾ ಇಷ್ಟಪಟ್ಟೆನು. ಅವರೂ ಕೂಡ ನಾನು ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬ ಹೆಮ್ಮೆ ವ್ಯಕ್ತಪಡಿಸಿದರು. ಇಂದಿರಾ ಗಾಂಧಿಯವರು ಸಾಕಷ್ಟು ಕಾರ್ಯಕ್ರಮಗಳಿಗೆ ನನ್ನ ಆಮಂತ್ರಿಸಿದ್ದಾರೆ. ಆ ಸಮಾರಂಭಗಳಲ್ಲಿ ನಾನು ದೇಶದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಅಂತಾ ಎಲ್ಲರಿಗೂ ಪರಿಚಯ ಮಾಡಿಸುತ್ತಿದ್ದರು. ನಾನು ಅವರ ಜತೆಗೆ ಕುಳಿತು ಒಂದೇ ಟೇಬಲ್‌ನಲ್ಲಿ ಉಪಹಾರ ಸೇವಿಸುತ್ತಿದ್ದ ಫೋಟೋ ಜನವರಿ 1975ರಂದು ತೆಗೆದಿರುವುದು ಅಂತಾ ತಮ್ಮ ಟ್ವಿಟರ್‌ನಲ್ಲಿ ನವಂಬರ್ 19, 2017ರಲ್ಲಿ ಫೋಟೋ ಸಮೇತ ಕಿರಣ್ ಬೇಡಿ ಬರೆದುಕೊಂಡಿದ್ದರು.