ನವದೆಹಲಿ:ಪತ್ರಕರ್ತ ಅರ್ನಾಬ್ ಗೋಸ್ವಾಮಿ ವಿಮಾನದಲ್ಲಿ ಮುಂಬೈಯಿಂದ ಲಕ್ನೋಗೆ ತೆರಳುತ್ತಿದ್ದಾಗ ಅವರನ್ನ ನಿಂದಿಸಿದ ಆರೋಪದ ಮೇಲೆ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ಅವರನ್ನು ಇಂಡಿಗೊ ಮತ್ತು ಏರ್ ಇಂಡಿಯಾ ಸಂಸ್ಥೆಗಳು ಆರು ತಿಂಗಳ ಕಾಲ ತಮ್ಮ ವಿಮಾನದಲ್ಲಿ ಪ್ರಯಾಣ ಮಾಡುವುದನ್ನು ನಿರ್ಬಂಧಿಸಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಇಂಡಿಗೋ ಸಂಸ್ಥೆ, 'ಮುಂಬೈನಿಂದ ಲಕ್ನೋಗೆ ತೆರಳುತ್ತಿದ್ದ 6E 5317 ವಿಮಾನದಲ್ಲಿ ಇತ್ತೀಚೆಗೆ ನಡೆದ ಘಟನೆಯನ್ನ ಆದರಿಸಿ ಕುನಾಲ್ ಕಮ್ರಾ ಅವರನ್ನು ಇಂಡಿಗೊ ವಿಮಾನದಲ್ಲಿ ಆರು ತಿಂಗಳ ಕಾಲ ಹಾರಾಟ ಮಾಡುವುದನ್ನು ಅಮಾನತುಗೊಳಿಸುತ್ತಿದ್ದೇವೆ. ಏಕೆಂದರೆ ವಿಮಾನದಲ್ಲಿ ಅವರ ನಡವಳಿಕೆ ಸ್ವೀಕಾರಾರ್ಹವಾಗಿರಲಿಲ್ಲ' ಎಂದು ತಿಳಿಸಿದೆ.
ಈ ಬೆನ್ನಲ್ಲೆ ಏರ್ ಇಂಡಿಯಾ ಕೂಡ ಮುಂದಿನ ಸೂಚನೆ ಬರುವವರೆಗೂ ಕುನಾಲ್ ಕಮ್ರಾ ಅವರು ನಮ್ಮ ಸಂಸ್ಥೆಯ ವಿಮಾನಲ್ಲಿ ಹಾರಾಟ ಮಾಡುವುದನ್ನ ನಿಷೇಧಿಸಿದ್ದೇವೆ ಎಂದಿದೆ.
ವಿಮಾನದೊಳಗೆ ಆಕ್ರಮಣಕಾರಿ ನಡವಳಿಕೆ ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಇದು ಪ್ರಯಾಣಿಕರ ಸುರಕ್ಷತೆಗೆ ಅಪಾಯ ಉಂಟುಮಾಡುತ್ತದೆ. ಸಂಬಂಧಪಟ್ಟ ವ್ಯಕ್ತಿಯ ಮೇಲೆ ಇದೇ ರೀತಿಯ ನಿರ್ಬಂಧಗಳನ್ನು ವಿಧಿಸಲು ಇತರ ವಿಮಾನಯಾನ ಸಂಸ್ಥೆಗಳಿಗೆ ಸಲಹೆ ನೀಡುತ್ತೇವೆ ಎಂದು ಸಿವಿಲ್ ಏವಿಯೇಷನ್ ಅಧಿಕಾರಿ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.
ಮುಂಬೈನಿಂದ ಲಕ್ನೋಗೆ ಇಂಡಿಗೊ ವಿಮಾನದಲ್ಲಿ ಪತ್ರಕರ್ತ ಅರ್ನಾಬ್ ಗೋಸ್ವಾಮಿ ಪ್ರಯಾಣ ಮಾಡುವಾಗ ಹಾಸ್ಯನಟ ಕುನಾಲ್ ಕಮ್ರಾ, ನೀನು ಹೇಡಿನಾ ಅಥವಾ ಪತ್ರಕರ್ತನಾ ಎಂದು ಗೋಸ್ವಾಮಿ ಅವರನ್ನ ಪ್ರಶ್ನೆ ಕೇಳಿ ನಿಂದಿಸಿದ್ದರು.