ನವದೆಹಲಿ: ದೇಶದಲ್ಲಿ ಕಳೆದ ಕೆಲ ದಿನಗಳಿಂದ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡು ಬಂದಿದ್ದು, ಇದೀಗ ಕಳೆದ 24 ಗಂಟೆಯಲ್ಲಿ 44,281 ಹೊಸ ಕೇಸ್ ದಾಖಲಾಗಿರುವುದು ಪತ್ತೆಯಾಗಿದೆ.
24 ಗಂಟೆಯಲ್ಲಿ 44,281 ಹೊಸ ಕೇಸ್: 50 ಸಾವಿರಕ್ಕೂ ಅಧಿಕ ಸೋಂಕಿತರು ಒಂದೇ ದಿನ ಡಿಸ್ಚಾರ್ಜ್! - ಭಾರತದಲ್ಲಿ ಒಟ್ಟು ಕೊರೊನಾ ಕೇಸ್
ಭಾರತದಲ್ಲಿ ಮಹಾಮಾರಿ ಕೊರೊನಾ ವೈರಸ್ ಹಾವಳಿ ಇದೀಗ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕಳೆದ 24 ಗಂಟೆಯಲ್ಲಿ 50 ಸಾವಿರಕ್ಕೂ ಕಡಿಮೆ ಕೋವಿಡ್ ಪ್ರಕರಣ ದಾಖಲಾಗಿವೆ.
ಸದ್ಯ ಭಾರತದಲ್ಲಿ 86,36,012 ಒಟ್ಟಾರೆ ಸೋಂಕಿತ ಪ್ರಕರಣಗಳಾಗಿದ್ದು, ಸದ್ಯ ದೇಶದಲ್ಲಿ 4,94,657 ಸಕ್ರಿಯ ಪ್ರಕರಣಗಳಿವೆ. ಇದಕ್ಕೆ ಸಂಬಂಧಿಸಿದಂತೆ ನಿನ್ನೆ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, 512 ಜನರು ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 50,326 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈ ಮೂಲಕ ಇಲ್ಲಿಯವರೆಗೆ 80,13,784 ಜನರು ಗುಣಮುಖರಾದಂತೆ ಆಗಿದೆ.
ಇನ್ನು ಕಳೆದ ಕೆಲ ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ನಿನ್ನೆ ಬರೋಬ್ಬರಿ 7,830 ಹೊಸ ಪ್ರಕರಣ ಕಾಣಿಸಿಕೊಂಡಿವೆ. ಈ ಮೂಲಕ ಡೆಲ್ಲಿಯಲ್ಲಿ 4.5 ಲಕ್ಷ ಕೋವಿಡ್ ಪ್ರಕರಣಗಳಿದ್ದು, ಸಾವಿನ ಸಂಖ್ಯೆ 7,143ಕ್ಕೆ ಏರಿಕೆಯಾಗಿದೆ.