ನವದೆಹಲಿ:ತುಂಬಾ ದಿನಗಳ ಲಾಕ್ಡೌನ್ ನಂತರ ಬಹುತೇಕ ಕೈಗಾರಿಕೆಗಳು ಪುನಾರಂಭವಾಗಿದ್ದು, ಜುಲೈ ತಿಂಗಳಲ್ಲಿ ಉತ್ಪಾದನಾ ವಲಯ ಸ್ವಲ್ಪಮಟ್ಟಿಗೆ ತನ್ನ ಚೇತರಿಕೆ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿದೆ ಎಂದು ಮಾಹಿತಿ ಪೂರೈಕೆ ಸಂಸ್ಥೆಯಾದ ಐಹೆಚ್ಎಸ್ ಮರ್ಕಿಟ್ ಇಂಡಿಯಾದ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕ (ಮ್ಯಾನುಫ್ಯಾಕ್ಚರಿಂಗ್ ಪರ್ಚೆಂಸಿಂಗ್ ಮ್ಯಾನೇಜರ್ಸ್ ಇಂಡೆಕ್ಸ್ -ಪಿಎಂಐ) ತನ್ನ ವರದಿಯಲ್ಲಿ ಹೇಳಿದೆ.
ಈ ಹಿಂದೆಯೂ ಕೂಡಾ ಐಹೆಚ್ಎಸ್ ಇಂಡಿಯಾ ಸಂಸ್ಥೆ ಉತ್ಪಾದನಾ ಖರೀದಿ ವ್ಯವಸ್ಥಾಪಕರ ಸೂಚ್ಯಂಕವನ್ನು ಬಿಡುಗಡೆ ಮಾಡಿದ್ದು, ಜೂನ್ ತಿಂಗಳಲ್ಲಿ 47.2ರಷ್ಟಿತ್ತು. ಈಗ ಜುಲೈ ತಿಂಗಳಲ್ಲಿ 46ಕ್ಕೆ ಇಳಿಕೆಯಾಗಿದೆ.
ಇತ್ತೀಚಿನ ಮ್ಯಾನುಫ್ಯಾಕ್ಚರಿಂಗ್ ಪರ್ಚೆಂಸಿಂಗ್ ಮ್ಯಾನೇಜರ್ಸ್ ಸೂಚ್ಯಂಕ ಕೊರೊನಾ ಸೋಂಕು ದೇಶದ ಮೇಲೆ ಯಾವ ರೀತಿಯಾಗಿ ವ್ಯತಿರಿಕ್ತ ಪರಿಣಾಮ ಬೀರಿದೆ ಎಂಬುದನ್ನು ಸೂಚಿಸುತ್ತದೆ ಎಂದು ಐಹೆಚ್ಎಸ್ ಮರ್ಕಿಟ್ನ ಅರ್ಥಿಕ ತಜ್ಞರೊಬ್ಬರು ಹೇಳಿದ್ದಾರೆ.
ಉದ್ಯಮಗಳು ಕೆಲಸ ಮಾಡಲು ಹೆಣಗಾಡುತ್ತಿವೆ. ಕೆಲವು ಉದ್ಯಮಿಗಳು ಇನ್ನೂ ಲಾಕ್ಡೌನ್ನಲ್ಲಿ ಉಳಿದಿದ್ದಾರೆ. ಲಾಕ್ಡೌನ್ನ ನಿಯಮಗಳು ಮತ್ತಷ್ಟು ಸಡಿಲವಾಗುವವರೆಗೆ ಉದ್ಯಮಗಳು ತಮ್ಮ ಕೆಲಸ ಮುಂದುವರೆಸುವುದಿಲ್ಲ ಎಂದು ಭಾವಿಸಲಾಗಿದೆ ಎಂದು ಐಎಚ್‌ಎಸ್ ಮಾರ್ಕಿಟ್‌ನ ಅರ್ಥಶಾಸ್ತ್ರಜ್ಞ ಎಲಿಯಟ್ ಕೆರ್ ಹೇಳಿದ್ದಾರೆ.
ಇನ್ನು ಕೆಲವು ಉದ್ಯಮಗಳಲ್ಲಿ ಸಿಬ್ಬಂದಿಯನ್ನು ಕಡಿಮೆ ಮಾಡಿ, ಉತ್ಪಾದನೆಯನ್ನು ಕಡಿಮೆ ಮಾಡಲಾಗಿದೆ. ಆದರೂ ಕೂಡಾ ತಿಂಗಳಿಂದ ತಿಂಗಳಿಗೆ ಉತ್ಪಾದನಾ ವಲಯದಲ್ಲಿ ಚೇತರಿಕೆ ಕಾಣುತ್ತಿತ್ತು. ಜುಲೈ ತಿಂಗಳಲ್ಲಿ ಮಾತ್ರ ಉತ್ಪಾದನಾ ವಲಯ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿದೆ.