ನವದೆಹಲಿ: ಭಾರತದ ಮೊದಲ ಸಿಡಿಎಸ್ ಅಗಿ ನೇಮಕಗೊಂಡಿರುವ ಜನರಲ್ ಬಿಪಿನ್ ರಾವತ್ ಅವರ ಉಡುಗೆ ವಿಶೇಷವಾಗಿದೆ. ಮೂರೂ ಸೇನೆಗೆ ಮುಖ್ಯಸ್ಥರಾದ ಅವರ ಸಮವಸ್ತ್ರ ಮತ್ತು ಧರಿಸುವ ಬ್ಯಾಡ್ಜ್‌ಗಳು ಸಾಕಷ್ಟು ವಿಶೇಷತೆಯಿಂದ ಕೂಡಿದೆ.
ಜನರಲ್ ಬಿಪಿನ್ ರಾವತ್ ಅವರು ತೊಡುವ ಕೆಲಸದ ಸಮವಸ್ತ್ರವು ಪ್ರಾಥಮಿಕವಾಗಿ ಜಂಟಿ, ಏಕೀಕರಣ ಮತ್ತು ಸಹಕಾರದ ಗುಣಗಳನ್ನ ಉದ್ದೇಶಿಸಿದ್ದು ಈ ಗುಣಗಳನ್ನೆ ಬ್ಯಾಡ್ಜ್‌ಗಳು ಪ್ರತಿಬಿಂಬಿಸುತ್ತವೆ.
ಸಿಡಿಎಸ್ ಬಿಪಿನ್ ರಾವತ್ ಬಳಸುವ ಲಾಂಛನ ಮೂರೂ ಸೇನೆಯಲ್ಲಿ ಬಳಸುವ ಚಿಹ್ನೆಗಳನ್ನ ಒಗ್ಗೂಡಿಸಿ ಮಾಡಲಾಗಿದೆ. ಮೂರು ತಲೆಯ ಸಿಂಹಗಳನ್ನು ಹೊಂದಿರುವ ರಾಷ್ಟ್ರೀಯ ಲಾಂಛನ ಕತ್ತಿಗಳ (ಭೂಸೇನೆ) ಮೇಲೆ ಕುಳಿತಿದೆ. ಹಾರುವ ಹದ್ದು(ಪಾಯುಪಡೆ), ಆ್ಯಂಕರ್(ನೌಕಾಪಡೆ) ಈ ಎಲ್ಲಾ ಚಿಹ್ನೆಗಳನ್ನ ಬಳಸಿ ಬ್ಯಾಡ್ಜ್ ಮಾಡಲಾಗಿದೆ. ಇದು ರಾವತ್ ಧರಿಸುವ ಅಂಗಿಯ ಗುಂಡಿ, ಬೆಲ್ಟ್ ಬಕಲ್, ಭುಜದಲ್ಲಿರುವ ಬ್ಯಾಡ್ಜ್ ಮತ್ತು ಅವರು ಬಳಸುವ ಕಾರಿನ ಮೇಲೂ ಈ ಲಾಂಛನ ಇರಲಿದೆ.
ನವದೆಹಲಿಯ ದಕ್ಷಿಣ ಬ್ಲಾಕ್ನಲ್ಲಿರುವ ಕಚೇರಿಯಲ್ಲಿ ಕುಳಿತು ಕೆಲಸ ಮಾಡುವ ಸಿಡಿಎಸ್ ಬಿಪಿನ್ ರಾವತ್ 13 ಲಕ್ಷ ಭಾರತೀಯ ಪ್ರಬಲ ಸೈನ್ಯವನ್ನ ಪ್ರತಿನಿಧಿಸುವ ಸಮವಸ್ತ್ರವನ್ನು ಧರಿಸುತ್ತಾರೆ. ಇದು ವಿಶ್ವದ ಎರಡನೇ ಅತಿದೊಡ್ಡ ಸೇನೆಯಾಗಿದ್ದು, ಭಾರತೀಯ ನೌಕಾಪಡೆಯು ಸುಮಾರು 56,000 ಸಿಬ್ಬಂದಿ ಹೊಂದಿದ್ದರೆ, ಭಾರತೀಯ ವಾಯುಪಡೆಯು ಸುಮಾರು 1 ಲಕ್ಷದ 40 ಸಾವಿರ ಸಿಬ್ಬಂದಿ ಹೊಂದಿದೆ.
ಸರ್ಕಾರಕ್ಕೆ ಏಕರೂಪದ ಸೇನಾ ಸಲಹೆ ನೀಡಲು ಅನುಕೂಲವಾಗುವಂತೆ ಮೂರೂ ಸೇನೆಗೆ ಮುಖ್ಯಸ್ಥರಾಗಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (ಸಿಡಿಎಸ್) ನೇಮಕ ಮಾಡುವ ತೀರ್ಮಾನಕ್ಕೆ ಭಾರತ ಸರ್ಕಾರ ಮನಸ್ಸು ಮಾಡಿತ್ತು. ಅದರ ಫಲಿತಾಂಶವಾಗಿ ಇದೀಗ ರಾವತ್ ಮೊದಲ ಸಿಡಿಎಸ್ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ.