ಕರ್ನಾಟಕ

karnataka

ETV Bharat / bharat

ಕಾರ್ಗಿಲ್ ಯುದ್ಧದಲ್ಲಿ ಪಾಕ್ ಬಗ್ಗುಬಡಿದಿದ್ದ ಕೆಚ್ಚೆದೆಯ ಯೋಧರು: ಪ್ರಧಾನಿ ಮೋದಿ ಸ್ಮರಣೆ - ಮಾಸಿಕ ರೇಡಿಯೋ ಕಾರ್ಯಕ್ರಮ

'ಮನ್ ಕಿ ಬಾತ್'ನ 67ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 1999ರ ಜುಲೈ 26 ರಂದು ಭಾರತದ ಕೆಚ್ಚೆದೆಯ ಯೋಧರ ಶೌರ್ಯಕ್ಕೆ ಇಡಿ ಜಗತ್ತೇ ಸಾಕ್ಷಿಯಾಗಿತ್ತು ಎಂದು ಕಾರ್ಗಿಲ್ ವಿಜಯ ದಿವಸವನ್ನು ಮನ್​ ಕಿ ಬಾತ್​ ನಲ್ಲಿ ನೆನಪಿಸಿಕೊಂಡರು.

PM Modi
ಪ್ರಧಾನಿ ಮೋದಿ

By

Published : Jul 26, 2020, 12:56 PM IST

ನವದೆಹಲಿ:ಭಾರತದ ಭೂಪ್ರದೇಶವನ್ನು ವಶಪಡಿಸಿಕೊಂಡು, ದೇಶದಲ್ಲಿ ನಡೆಯುತ್ತಿದ್ದ ಆಂತರಿಕ ಸಂಘರ್ಷಗಳನ್ನು ದುರುಪಯೋಗ ಪಡಿಸಿಕೊಳ್ಳಲು ಹೊರಟಿದ್ದ ಪಾಕಿಸ್ತಾನಕ್ಕೆ ನಮ್ಮ ಯೋಧರು ತಕ್ಕ ಶಾಸ್ತಿ ಮಾಡಿದ್ದರು ಎಂದು 'ಕಾರ್ಗಿಲ್ ವಿಜಯ ದಿವಸ್' ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಪಾಕಿಸ್ತಾನವನ್ನು ಟೀಕಿಸಿದರು.

ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್'ನ 67ನೇ ಆವೃತ್ತಿಯಲ್ಲಿ ಮಾತನಾಡಿದ ಅವರು, ಇಂದಿಗೆ ಸರಿಯಾಗಿ 21 ವರ್ಷಗಳ ಹಿಂದೆ ನಮ್ಮ ಸೈನಿಕರು ಕಾರ್ಗಿಲ್ ಯುದ್ಧವನ್ನು ಗೆದ್ದಿದ್ದರು. ಯುದ್ಧ ನಡೆದ ಆ ಸಂದರ್ಭಗಳನ್ನು ಭಾರತವು ಎಂದಿಗೂ ಮರೆಯಲು ಸಾಧ್ಯವಿಲ್ಲ. ಭಾರತವು ಪಾಕಿಸ್ತಾನದೊಂದಿಗೆ ಸೌಹಾರ್ದಯುತ ಸಂಬಂಧವನ್ನು ಹೊಂದಲು ಪ್ರಯತ್ನಿಸುತ್ತಿತ್ತು. ಯಾವುದೇ ಕಾರಣವಿಲ್ಲದೆ ದ್ವೇಷ ಸಾಧಿಸುವುದು ದುಷ್ಟರ ಸ್ವಭಾವ ಎಂಬುದಕ್ಕೆ ಪಾಕಿಸ್ತಾನ ಸಾಕ್ಷಿಯಾಗಿತ್ತು ಎಂದರು.

ಭಾರತದ ಭೂಮಿಯನ್ನು ವಶಪಡಿಸಿಕೊಳ್ಳಲು ಮತ್ತು ಇಲ್ಲಿ ನಡೆಯುತ್ತಿರುವ ಆಂತರಿಕ ಸಂಘರ್ಷಗಳನ್ನು ಬೇರೆಡೆಗೆ ತಿರುಗಿಸಲು ಪಾಕಿಸ್ತಾನವು ಹೊಂಚು ಹಾಕಿ ಯುದ್ಧ ಸಾರಿತ್ತು. ಆದರೆ ಭಾರತದ ಕೆಚ್ಚೆದೆಯ ಯೋಧರ ಶೌರ್ಯಕ್ಕೆ ಇಡಿ ಜಗತ್ತೇ ಸಾಕ್ಷಿಯಾಯಿತು ಎಂದು 1999ರ ಜುಲೈ 26 ರಂದು ಪಾಕಿಸ್ತಾನಿ ಸೈನಿಕರನ್ನು ಬಗ್ಗುಬಡೆದ ಭಾರತೀಯ ಸಶಸ್ತ್ರ ಪಡೆಯು ಟೈಗರ್ ಹಿಲ್ ಮೇಲೆ ಮತ್ತೆ ತ್ರಿವರ್ಣ ಧ್ವಜ ಹಾರಿಸಿದನ್ನು ಮೋದಿ ಸ್ಮರಿಸಿದರು.

ಇದಕ್ಕೂ ಮುನ್ನ ಟ್ವೀಟ್​ ಮಾಡಿ ಕಾರ್ಗಿಲ್​ ಯುದ್ಧದ ವಿಜಯ ಪತಾಕೆ ಹಾರಿಸಿದ್ದ ಯೋಧರನ್ನು ನೆನಪು ಮಾಡಿಕೊಂಡಿದ್ದ ಪ್ರಧಾನಿ, ಈ ಕುರಿತು ಮನ್​ ಕಿ ಬಾತ್​ನಲ್ಲಿ ಮಾತನಾಡುವೆ ಎಂದು ತಿಳಿಸಿದ್ದರು.

ಇದೇ ವೇಳೆ ದೇಶದ ಕೋವಿಡ್​ ಹೋರಾಟದ ಬಗ್ಗೆ ಮಾತನಾಡಿದ ಅವರು, ಇತರ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೊನಾ ಚೇತರಿಕೆಯ ಪ್ರಮಾಣ ಹೆಚ್ಚಿದ್ದು, ಸಾವಿನ ಪ್ರಮಾಣ ತೀರಾ ಕಡಿಮೆಯಿದೆ. ನಾವು ಲಕ್ಷಾಂತರ ಜನರ ಪ್ರಾಣ ಉಳಿಸುವಷ್ಟು ಸಮರ್ಥರಾಗಿದ್ದೇವೆ. ಆದರೆ ಈ ಹೋರಾಟ ಇನ್ನೂ ಮುಗಿದಿಲ್ಲ, ಹಲವು ಪ್ರದೇಶಗಳಲ್ಲಿ ವೈರಸ್​ ವೇಗವಾಗಿ ಹರಡುತ್ತಿದೆ. ನಾವು ಮುನ್ನೆಚ್ಚರಿಕೆಯಿಂದ ಇರಬೇಕು.

ಜಮ್ಮುವಿನ ಟ್ರೆವಾ ಎಂಬ ಗ್ರಾಮದ ಮುಖಂಡೆ ಬಲ್ಬೀರ್ ಕೌರ್, ತಮ್ಮ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ 30 ಬೆಡ್​ಗಳ ಸಾಮರ್ಥ್ಯದ ಕ್ವಾರಂಟೈನ್​ ಕೇಂದ್ರವನ್ನು ತೆರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್​ನ ಪುರಸಭೆ ಅಧ್ಯಕ್ಷ ಮೊಹಮ್ಮದ್ ಇಕ್ಬಾಲ್ 50,000 ರೂ. ವೆಚ್ಚದಲ್ಲಿ ಸ್ಪ್ರೇಯರ್​ ಮಷಿನ್​​ ಅನ್ನು ತಯಾರಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಇವರ ಕಾರ್ಯಗಳು ಇಡೀ ದೇಶಕ್ಕೆ ಸ್ಫೂರ್ತಿದಾಯಕವಾಗಿವೆ ಎಂದು ಬಣ್ಣಿಸಿದರು.

ಈ ಬಾರಿಯ 'ರಕ್ಷಾಬಂಧನ'ವನ್ನು ವಿಭಿನ್ನವಾಗಿ ಆಚರಿಸಲು ಜನರು ಹಾಗೂ ಕೆಲವು ಸಂಸ್ಥೆಗಳು ಸಿದ್ಧತೆ ನಡೆಸುತ್ತಿವೆ. ಇನ್ನೂ ಕೆಲವರು ಇದನ್ನು 'ವೋಕಲ್ ಫಾರ್ ಲೋಕಲ್'ಗೆ ಲಿಂಕ್​ ಮಾಡುತ್ತಿದ್ದಾರೆ. ಇದು ಒಳ್ಳೆಯ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ABOUT THE AUTHOR

...view details