ಹೈದರಾಬಾದ್: ಜುಲೈ ತಿಂಗಳಿನಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಮುಂದಿನ ದಿನಗಳಲ್ಲಿ ಎಬೋಲಾ, ಹಳದಿ ಜ್ವರ, ಎವಿಯನ್ ಇನ್ಲ್ಫಯೆಂಜಾ ಮತ್ತಿತರ ಹತ್ತು ಅಪಾಯಕಾರಿ ವೈರಸ್‌ಗಳಿಂದ ಹರಡುವ ಸೋಂಕು ಜ್ವರಗಳ ವಿರುದ್ಧ ಹೋರಾಡಲು ದೇಶ ಸದಾ ಸಿದ್ಧವಾಗಿರಬೇಕು ಎಂದು ಒತ್ತಿ ಹೇಳಿತ್ತು. ಸಾರ್ವಜನಿಕ ಆರೋಗ್ಯದ ಮೇಲೆ ಈ ವೈರಸ್ ಸೋಂಕುಗಳು ಅತೀವ ದುಷ್ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ಮಂಡಳಿ ಈ ಎಚ್ಚರಿಕೆ ನೀಡಿತ್ತು.
ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ವಿಶ್ವದೆಲ್ಲೆಡೆ, ಎಲ್ಲಾ ದೇಶಗಳ ಆರೋಗ್ಯ ವ್ಯವಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಅವನತಿಯತ್ತ ತಳ್ಳಿತು. ದೊಡ್ಡ ಮಟ್ಟದಲ್ಲಿ ಈ ರೋಗ ಆರೋಗ್ಯ ವ್ಯವಸ್ಥೆಗಳ ಮೇಲೆ ಒತ್ತಡ ಹೇರಿತು. ಜಗತ್ತಿನ ಉದ್ದಗಲಕ್ಕೂ ಇದು ಈ ವರೆಗೆ ಸುಮಾರು 18 ಲಕ್ಷ ಜನರ ಸಾವಿಗೆ ಕಾರಣವಾಗಿದೆ. ಇದರ ಜೊತೆಗೆ, ವಿಶ್ವದ ಎಲ್ಲಾ ದೇಶಗಳ ಆರ್ಥಿಕತೆಯ ಮೇಲೆ ಹೊಡೆತ ನೀಡಿತು.
ವಿಶ್ವ ಆರೋಗ್ಯ ಸಂಸ್ಥೆ ಈ ನಿಟ್ಟಿನಲ್ಲಿ ನೀಡಿದ ಹೇಳಿಕೆ ಇಲ್ಲಿ ಗಮನಾರ್ಹ. ಈ ವರ್ಷ (2020) ಕೋವಿಡ್-19 ಸೋಂಕು ವಿಶ್ವದ ಆರೋಗ್ಯ ವ್ಯವಸ್ಥೆಯನ್ನು ನಾಶಪಡಿಸಿತು ಎಂದು ವಿಷಾದಿಸಿರುವ ಸಂಸ್ಥೆ, ಕೋವಿಡ್ 19 ರೋಗವು ಅತಿ ವೇಗವಾಗಿ ವಿಶ್ವಾದ್ಯಂತ ಹರಡಿ, ನಮ್ಮ ದೇಶಗಳಲ್ಲಿನ ವೈದ್ಯಕೀಯ ಮತ್ತು ಆರೋಗ್ಯ ವ್ಯವಸ್ಥೆಗಳಲ್ಲಿನ ದೋಷಗಳನ್ನು ಎತ್ತಿ ತೋರಿಸಿತು ಎಂದು ಅಭಿಪ್ರಾಯಪಟ್ಟಿದೆ.
ಇದರ ಜೊತೆಗೆ, ಸಂಸ್ಥೆಯು ಇನ್ನೊಂದು ಆಘಾತಕಾರಿ ಸಂಗತಿಯನ್ನು ಕೂಡಾ ತಿಳಿಸಿದೆ. ಅದೇನೆಂದರೆ, ಕಳೆದ ಎರಡು ದಶಕಗಳಲ್ಲಿ ವೈದ್ಯಕೀಯ ರಂಗದ ನಾನಾ ಕ್ಷೇತ್ರಗಳಲ್ಲಿ ನಾವು ಸಾಧಿಸಿದ ಪ್ರಗತಿಯ ಎಲ್ಲಾ ಲಾಭಗಳನ್ನು ಈ ಸಾಂಕ್ರಾಮಿಕ ರೋಗ ನಾಶಗೊಳಿಸಿದೆ. ಈ ಸಂಶೋಧನೆಯ ಫಲ ನಮಗೆ ತಲುಪದಂತೆ ಮಾಡಿದೆ ಎಂದು ಸಂಸ್ಥೆ ತಿಳಿಸಿದೆ.
ಜಗತ್ತನ್ನೆ ತಲ್ಲಣಗೊಳಿಸಿರುವ, ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬೇಕಾದ ನಾನಾ ವೈದ್ಯಕೀಯ ಅಸ್ತ್ರಗಳು ರೂಪುಗೊಳ್ಳುತ್ತಿರುವ ಈ ಸಮಯದಲ್ಲಿ, ಅವುಗಳನ್ನು ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದಲ್ಲಿ ಸೂಕ್ತವಾಗಿ ಬಳಸುವ ಸಂಬಂಧ, ವಿಶ್ವ ಆರೋಗ್ಯ ಸಂಸ್ಥೆ ಜಗತ್ತಿನ ಎಲ್ಲಾ ದೇಶಗಳು ಹತ್ತು ಅಂಶಗಳ ಕ್ರಿಯಾ ಯೋಜನೆಯನ್ನು ಜಾರಿಗೆ ತರಬೇಕೆಂದು ಸೂಚಿಸಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಎಲ್ಲರೂ ಕೊರೊನಾ ವೈರಸ್‌ನಿಂದ ಸುರಕ್ಷಿತವಾಗಿರುವವರೆಗೂ ಯಾರೂ ಸುರಕ್ಷಿತವಾಗಿಲ್ಲ. ಈ ಹಿನ್ನೆಲೆಯಲ್ಲಿ ವಿಶ್ವದ ಎಲ್ಲರ ಆರೋಗ್ಯಕ್ಕಾಗಿ ಜೊತೆಯಾಗಿ ಕೈಜೋಡಿಸಿ ಮುನ್ನಡೆಯುವಂತೆ, ವಿಶ್ವ ಆರೋಗ್ಯ ಸಂಸ್ಥೆ ಎಲ್ಲಾ ದೇಶಗಳಿಗೂ ಕರೆ ನೀಡಿದೆ. ಕೋವಿಡ್-19 ಲಸಿಕೆಗಳ ತ್ವರಿತ ಉತ್ಪಾದನೆಗೆ “ಬಯೋ ಬ್ಯಾಂಕ್” ರಚಿಸುವ ಪ್ರಸ್ತಾಪವನ್ನೂ ಅದು ಜಗತ್ತಿನ ರಾಷ್ಟ್ರಗಳ ಮುಂದಿಟ್ಟಿದೆ.
ಇದರ ಜೊತೆಗೆ, ಕೋವಿಡ್ ರೋಗದ ವಿರುದ್ಧದ ಚಿಕಿತ್ಸೆಗೆ ಅಗತ್ಯವಾಗಿರುವ ಹಣಕಾಸಿನ ಕಾರಣಕ್ಕೆ ಲಕ್ಷಾಂತರ ಕುಟುಂಬಗಳು ಬಡತನದತ್ತ ಹೆಜ್ಜೆ ಇಡುತ್ತಿವೆ ಎಂದು ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಭಾರತದಲ್ಲಿ ಸುಮಾರು ಆರು ಕೋಟಿ ಜನರು ವೈದ್ಯಕೀಯ ಆಕಸ್ಮಿಕ ಸಮಯದಲ್ಲಿ ಎದುರಾಗುವ ಭಾರಿ ಖರ್ಚಿನ ಕಾರಣಕ್ಕಾಗಿ ಬಡತನದ ಪ್ರಪಾತಕ್ಕೆ ನೂಕಲ್ಪಡುತ್ತಾರೆ. ಈ ಸಂಖ್ಯೆ ಕೋವಿಡ್ ೧೯ ಸಮಯದಲ್ಲಿ ಇನ್ನಷ್ಟು ಹೆಚ್ಚಳಗೊಂಡಿದೆ.
ಇನ್ನು ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಕೋವಿಡ್ ಸಾವಿಗೆ ಕಾರಣವಾಗುವ ಹತ್ತು ಪ್ರಮುಖ ಕಾರಣಗಳಲ್ಲಿ ಏಳು ಸಾಂಕ್ರಾಮಿಕವಲ್ಲದ ಕಾಯಿಲೆಗಳು ಕಾರಣ ಎಂದು ಹೇಳುತ್ತದೆ. ಇದರ ಜೊತೆಗೆ ಈ ರೋಗವನ್ನು ತಡೆಗಟ್ಟಲು ಮಾನಸಿಕ ಆರೋಗ್ಯ ರಕ್ಷಣೆ ಮತ್ತು ತಂಬಾಕು ದುಶ್ಚಟಗಳಿಗೆ ಈಡಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸಂಸ್ಥೆ ಎಲ್ಲಾ ದೇಶಗಳಿಗೂ ಸೂಚಿಸಿದೆ. ಇದು ನಿಜಕ್ಕೂ ಸ್ವಸ್ಥ ಭಾರತ್ (ಆರೋಗ್ಯಕರ ಭಾರತ) ದದೆಡೆ ನಾವು ಸಾಗಲು ಬೇಕಾದ ರಹದಾರಿಯಾಗಿದೆ.
15 ನೇ ಹಣಕಾಸು ಆಯೋಗದ ಅಡಿಯಲ್ಲಿ ರಚಿಸಲಾದ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ, ಉನ್ನತ ಮಟ್ಟದ ತಜ್ಞರ ತಂಡ, ಆರೋಗ್ಯದ ಹಕ್ಕನ್ನು ಮೂಲಭೂತ ಹಕ್ಕು ಎಂದು ಘೋಷಿಸಬೇಕೆಂದು ಶಿಫಾರಸು ಮಾಡಿತ್ತು. ಮುಂದಿನ ವರ್ಷ ನಮ್ಮ ದೇಶ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವ ಆಚರಿಸುವ ಸಂದರ್ಭದಲ್ಲಿ ಇದನ್ನು ಜಾರಿಗೊಳಿಸಬೇಕು ಎಂದು ಅದು ಶಿಫಾರಸು ಮಾಡಿದೆ.