ನವದೆಹಲಿ:ಮಹಾರಾಷ್ಟ್ರದ ಔರಂಗಾಬಾದ್ ಬಳಿ ಗೂಡ್ಸ್ ರೈಲು 16 ವಲಸೆ ಕಾರ್ಮಿಕರನ್ನು ಬಲಿ ಪಡೆದ ಘಟನೆ ಸಂಬಂಧ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತ ಶೈಲೇಶ್ ಯಾದವ್ ಅವರು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಅವರಿಗೆ ಪತ್ರ ಬರೆದಿದ್ದಾರೆ. ಈ ರೀತಿಯ ಅಪಘಾತಗಳು ಮರುಕಳಿಸದಂತೆ ರೈಲ್ವೆ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ನೀಡಿ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಔರಂಗಾಬಾದ್ ದುರಂತ ಭವಿಷ್ಯದಲ್ಲಿ ಸಂಭವಿಸಬಾರದು: ರೈಲ್ವೆಗೆ ಸುರಕ್ಷತಾ ಆಯೋಗದ ಸೂಚನೆ - ರೈಲು ಹರಿದು 16 ಕಾರ್ಮಿಕರು ಸಾವು
ಮಹಾರಾಷ್ಟ್ರದ ಔರಂಗಾಬಾದ್ ಬಳಿ ಗೂಡ್ಸ್ ರೈಲು ಹರಿದು 16 ವಲಸೆ ಕಾರ್ಮಿಕರು ಮೃತಪಟ್ಟ ಹಿನ್ನೆಲೆ ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆ ರೈಲ್ವೆ ಸುರಕ್ಷತಾ ಆಯೋಗ ರೈಲ್ವೆ ಮಂಡಳಿಗೆ ಸೂಚಿಸಿದೆ.
ಮೃತ ಕಾರ್ಮಿಕರಿಗೆ ಸಂತಾಪ ಸೂಚಿಸಿರುವ ಅವರು ಇನ್ಮುಂದೆ ಇಂತಹ ಘಟನೆಗಳು ಮರುಕಳಿಸಿದಂತೆ ತಡೆಯಲು ಎಲ್ಲ ರೀತಿಯ ಪ್ರಯತ್ನ ಮಾಡಬೇಕು ಎಂದು ತಿಳಿಸಿದ್ದಾರೆ. ಕೊರೊನಾ ಲಾಕ್ಡೌನ್ ಹಿನ್ನೆಲೆ ಯಾವುದೇ ರೈಲುಗಳು ಸಂಚರಿಸುತ್ತಿಲ್ಲ ಎಂದು ಭಾವಿಸಿ ಕಾರ್ಮಿಕರೆಲ್ಲ ರೈಲು ಹಳಿ ಮೇಲೆ ಮಲಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರೈಲ್ವೆ ಸುರಕ್ಷತಾ ಆಯೋಗವು ಎಲ್ಲ ಗಂಭೀರ ರೈಲು ಅಪಘಾತಗಳ ಬಗ್ಗೆ ತನಿಖೆ ನಡೆಸುತ್ತದೆ. ಈ ವಿಷಯದ ಬಗ್ಗೆ ವಲಯ ಕಚೇರಿಗಳಿಗೆ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಆಯುಕ್ತರು ರೈಲ್ವೆ ಮಂಡಳಿಯ ಅಧ್ಯಕ್ಷರಿಗೆ ಒತ್ತಾಯಿಸಿದ್ದಾರೆ.