ಬೆಂಗಳೂರು:ಸಾರ್ವತ್ರಿಕ ಚುನಾವಣೆಯಲ್ಲಿ ನಾಗರಿಕರನ್ನು ಮತದಾನದಲ್ಲಿ ತೊಡಗಿಸಿಕೊಳ್ಳಲು ಕೇಂದ್ರ ಹಾಗೂ ರಾಜ್ಯ ಚುನಾವಣಾ ಆಯೋಗಗಳು ಸಾಕಷ್ಟು ಪ್ರಚಾರ ನಡೆಸಿ ಮತದಾನ ಹೆಚ್ಚಳಕ್ಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಆದರೆ, ತನ್ನ ಒಂದು ವೋಟ್ ವ್ಯರ್ಥವಾಗಬಾರದೆಂದು ದೂರದ ಆಸ್ಟ್ರೇಲಿಯಾದಿಂದ ಬಂದಿದ್ದಾರೆ ಮಾದರಿ ಪ್ರಜೆ.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನೆಲಸಿರುವ ಮಂಗಳೂರು ಮೂಲದ ಸುಧೀಂದ್ರ ಹೆಬ್ಬಾರ್ (41), ತನ್ನ ಒಂದು ಮತ ವ್ಯರ್ಥವಾಗಬಾರದು ಹಾಗೂ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿಯಾಗಿ ನೋಡಬೇಕು ಎಂಬ ಆಸೆಯಿಂದ ಭಾರತಕ್ಕೆ ಬಂದಿದ್ದಾರಂತೆ.
ಎಂಬಿಎ ಪದವೀಧರ ಹೆಬ್ಬಾರ್, ಸಿಡ್ನಿ ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 'ಲೋಕಸಭೆ ಚುನಾವಣೆ ಪ್ರಯುಕ್ತ ತವರಲ್ಲಿ ಮತ ಚಲಾಯಿಸಲು ಏಪ್ರಿಲ್ 5ರಿಂದ 12ರವರೆಗೆ ರಜೆ ಮಂಜೂರು' ಮಾಡುವಂತೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮನವಿ ಮಾಡಿದ್ದರು.
ಈಸ್ಟರ್ ಹಾಗೂ ರಮ್ಜಾನ್ ಹಬ್ಬದ ಹಿನ್ನೆಲೆಯಲ್ಲಿ ನಿಲ್ದಾಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರಯಾಣಿಕರು ತುಂಬಿರುವುದರಿಂದ ರಜೆಯನ್ನು ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಆದರೆ, ಹೆಬ್ಬಾರ್ ತನಗೆ ಕೆಲಸಕ್ಕಿಂತ ಮೋದಿ ಮೇಲಿನ ಅಭಿಮಾನ ಮತ್ತು ಮತದಾನ ಮಹತ್ವ ಹೆಚ್ಚಿನದ್ದು, ತನ್ನ ಒಂದು ಮತ ವ್ಯರ್ಥ ಆಗದಿರಲಿ ಎಂದು ಕೆಲಸಕ್ಕೆ ರಾಜೀನಾಮೆ ಸಲ್ಲಿಸಿ ತವರಿಗೆ ಮರಳಿದ್ದಾರೆ.
'ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿರುವುದರಿಂದ ಯುರೋಪ್, ಆಫ್ರಿಕಾ, ಪಾಕಿಸ್ತಾನ ಸೇರಿದಂತೆ ಎಲ್ಲ ದೇಶಗಳ ಪ್ರಯಾಣಿಕರ ಪರಿಚಯವಿದೆ. ಮುಂದಿನ ದಿನಗಳಲ್ಲಿ ಭಾರತಕ್ಕೆ ಉತ್ತಮ ಭವಿಷ್ಯವಿದೆ ಎಂದು ಅವರು ಪ್ರಶಂಸುತ್ತಿದ್ದಾಗ, ನನಗೆ ಹೆಮ್ಮೆ ಆಗುತ್ತಿತ್ತು. ಗಡಿಯಲ್ಲಿ ದೇಶದ ಕಾವಲು ಕಾಯಲು ಸಾಧ್ಯವಾಗುವುದಿಲ್ಲ. ಮತ ಚಲಾಯಿಸಿ ನನ್ನ ಸಾಮಾನ್ಯ ಕರ್ತವ್ಯ ತೋರಲು ಹಾಗೂ ಮತದ ಹಕ್ಕನ್ನು ಚಲಾಯಿಸಿಲು ಭಾರತಕ್ಕೆ ಬಂದಿದ್ದೇನೆ' ಎನ್ನುತ್ತಾರೆ ಹೆಬ್ಬಾರ್.