ನವದೆಹಲಿ:ಭಾರತ ಮತ್ತು ಮ್ಯಾನ್ಮಾರ್ ನಡುವಿನ ಸಂಬಂಧವನ್ನು ಬಲಪಡಿಸಲು ಹಾಗೂ ದ್ವಿಪಕ್ಷೀಯ ಕಡಲ ಸಂಬಂಧವನ್ನು ಹೆಚ್ಚಿಸಲು ನಾಲ್ಕು ದಿನಗಳ ಕಾಲ ನಾಯ್ಪಿಟಾವ್ ಮತ್ತು ನೆರೆಯ ದೇಶದ ಇತರ ಭಾಗಗಳಿಗೆ ಭಾರತೀಯ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಪ್ರಯಾಣ ಆರಂಭಿಸಿದ್ದಾರೆ.
ಇವರು ಫೆಬ್ರವರಿ 17 ರಿಂದ ಫೆಬ್ರವರಿ 20 ರವರೆಗೆ ಮ್ಯಾನ್ಮಾರ್‌ನಲ್ಲಿ ತಂಗಲಿದ್ದಾರೆ. ಈ ಭೇಟಿ ಭಾರತ ಮತ್ತು ಮ್ಯಾನ್ಮಾರ್ ನಡುವಿನ ದ್ವಿಪಕ್ಷೀಯ ಕಡಲ ಸಂಬಂಧವನ್ನು ಗಟ್ಟಿಗೊಳಿಸಲು ಮತ್ತು ಹೆಚ್ಚಿಸಲು ಉದ್ದೇಶವನ್ನು ಹೊಂದಿದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಮ್ಯಾನ್ಮಾರ್ ನೌಕಾಪಡೆಯ ಕಮಾಂಡರ್-ಇನ್-ಚೀಫ್ ಅಡ್ಮಿರಲ್ ಟಿನ್ ಆಂಗ್ ಸಾನ್ ಅವರೊಂದಿಗೆ ದ್ವಿಪಕ್ಷೀಯ ಚರ್ಚೆ ನಡೆಸಲಿದ್ದಾರೆ ಮತ್ತು ಹಿರಿಯ ಜನರಲ್ ಮಿನ್ ಆಂಗ್ ಹೇಲಿಂಗ್, ಕಮಾಂಡರ್-ಇನ್-ಚೀಫ್ ಡಿಫೆನ್ಸ್ ಸರ್ವೀಸಸ್ ಮತ್ತು ಇತರ ಹಿರಿಯ ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆಂದು ತಿಳಿದುಬಂದಿದೆ.