ನವದೆಹಲಿ: ಪಶ್ಚಿಮ ಲಡಾಖ್ನಲ್ಲಿ ಚೀನಾ ಸೇನೆಯೊಂದಿಗೆ ಉಗ್ರ ಘರ್ಷಣೆ ಮುಂದುವರಿದಿರುವ ಬೆನ್ನಲ್ಲೇ ಚೀನಾದೊಂದಿಗೆ ಮಾತುಕತೆಗೆ ತಾನು ಸಿದ್ಧ ಎಂದು ಭಾರತೀಯ ಸೇನೆ ತಿಳಿಸಿದೆ. ಸಂಘರ್ಷ ನಿರ್ಮಾಣವಾಗಿರುವ ಗಡಿಯಲ್ಲಿನ ಚುಶುಲ್ ಪ್ರದೇಶದ ಭಾರತೀಯ ಸೇನಾಪಡೆಯ ತಂಡವು ಬರುವ ಕೆಲ ದಿನಗಳಲ್ಲಿ ಚೀನಾದೊಂದಿಗೆ ಮಾತುಕತೆ ಆರಂಭಿಸಲಿದೆ.
ಲಡಾಖ್ ಗಡಿಯಲ್ಲಿ ಭಾರತ ಹಾಗೂ ಚೀನಾ ಮಿಲಿಟರಿ ಸಂಘರ್ಷ ಆರಂಭವಾಗಿ ಎರಡು ತಿಂಗಳು ಕಳೆದಿವೆ. ಈ ಮಧ್ಯೆ ಚೀನಾದೊಂದಿಗೆ ಮಾತುಕತೆ ಆರಂಭಿಸಲು ಭಾರತೀಯ ಸೇನೆಯ ಕೇಂದ್ರ ಕಚೇರಿ ಹಾಗೂ ಕೇಂದ್ರ ಸರ್ಕಾರದಿಂದ ಸೇನಾಪಡೆಯ ತಂಡಕ್ಕೆ ಸೂಕ್ತ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
ಈ ಮುನ್ನ ಜೂನ್ 6 ರಂದು ಎರಡೂ ದೇಶಗಳ ಮಧ್ಯೆ ಮಿಲಿಟರಿ ಕಮಾಂಡರ್ ಮಟ್ಟದಲ್ಲಿ ಆರಂಭಿಕ ಮಾತುಕತೆಗಳು ನಡೆದಿವೆ. ಭಾರತದ ಪರವಾಗಿ 14 ಕೋರ್ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಹರಿಂದರ್ ಸಿಂಗ್ ಹಾಗೂ ಚೀನಾ ಪರವಾಗಿ ದಕ್ಷಿಣ ಜಿಂಜಿಯಾಂಗ್ ಮಿಲಿಟರಿ ಡಿಸ್ಟ್ರಿಕ್ಟ್ ಕಮಾಂಡರ್ ಮೇಜರ್ ಜನರಲ್ ಲಿಯು ಲಿನ್ ಈ ಮಾತುಕತೆಯಲ್ಲಿ ಭಾಗವಹಿಸಿದ್ದರು. ಲಡಾಖ್ ಬಳಿಯ ಚುಶುಲ್ನ ಮೊಲ್ಡೊನಲ್ಲಿ ಈ ಮಾತುಕತೆ ನಡೆದಿದ್ದವು.
ಎರಡೂ ಬಣಗಳು ತಮ್ಮ ವಾದಕ್ಕೆ ಗಟ್ಟಿಯಾಗಿ ಅಂಟಿಕೊಂಡ ಪರಿಣಾಮವಾಗಿ ಯುದ್ಧಭೂಮಿಯಲ್ಲಿ ವಾತಾವರಣ ತಿಳಿಯಾಗಲಿಲ್ಲವಾದರೂ, ಮುಂದಿನ ದಿನಗಳಲ್ಲಿ ರಾಜತಾಂತ್ರಿಕ ಹಾಗೂ ಮಿಲಿಟರಿ ಮಟ್ಟದಲ್ಲಿ ಪರಸ್ಪರ ಮಾತುಕತೆಗಳನ್ನು ಮುಂದುವರಿಸಲು ಎರಡೂ ಬಣಗಳು ಒಪ್ಪಿಕೊಂಡಿದ್ದು ದೊಡ್ಡ ಸಾಧನೆಯಾಗಿದೆ.
ಭಾರತದ ಪ್ರದೇಶದೊಳಗೆ ನುಗ್ಗಲು ಚೀನಾ ದೊಡ್ಡ ಪ್ರಮಾಣದ ಸೇನೆಯನ್ನು ನಿಯೋಜಿಸಿತ್ತು. ಆದರೆ ಸಕಾಲದಲ್ಲಿ ಕಾರ್ಯಪ್ರವೃತ್ತವಾದ ಭಾರತೀಯ ಸೇನೆ ಚೀನಾ ತಂತ್ರಗಳನ್ನು ಹಾಳುಗೆಡವಿತ್ತು. ಚೀನಾ ಸೇನೆಗಿಂತ ಹೆಚ್ಚು ಪ್ರಮಾಣದ ಸೇನಾಬಲವನ್ನು ಲಡಾಖ್ನಲ್ಲಿ ಭಾರತ ನಿಯೋಜಿಸಿದ್ದು ಚೀನಾಕ್ಕೆ ನುಂಗಲಾರದ ತುತ್ತಾಗಿತ್ತು.