ನವದೆಹಲಿ:ಇವತ್ತು ಜುಲೈ 11, ವಿಶ್ವ ಜನಸಂಖ್ಯಾ ದಿನ. ನಮ್ಮ ದೇಶವನ್ನು ಕಾಡುವ ಗಂಭೀರ ಸಮಸ್ಯೆ ಜನಸಂಖ್ಯೆ. ಭಾರತದ ಜನಸಂಖ್ಯಾವೃದ್ದಿ ದರ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದ್ರೆ, ಅದಕ್ಕಿಂತಲೂ ಮುಖ್ಯವಾಗಿ ಈ ಸಮಸ್ಯೆಯ ಜೊತೆ ತಳುಕು ಹಾಕಿಕೊಂಡಿರುವ ಒಂದು ಸಂಗತಿ ಇದೆ. ಅದು ಏನೆಂದರೆ, ಲೈಂಗಿಕವಾಗಿ ಸಕ್ರಿಯರಾಗಿರುವ ಶೇ. 94.4 ರಷ್ಟು ಭಾರತೀಯರು ಲೈಂಗಿಕ ಕ್ರಿಯೆ ನಡೆಸುವ ವೇಳೆ ಕಾಂಡೋಮ್ ಬಳಸುತ್ತಿಲ್ಲವಂತೆ.
ಹಾಗಂತ ಪುರುಷರಿಗೆ ಕಾಂಡೋಮ್ ಬಳಕೆಯ ಮಹತ್ವದ ಅರಿವಿಲ್ಲ ಎಂದಲ್ಲ. ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ- 4ರ ಪ್ರಕಾರ, ಶೇ 97.9 ರಷ್ಟು ಲೈಂಗಿಕವಾಗಿ ಸಕ್ರಿಯರಾಗಿರುವ ಪುರುಷರಿಗೆ ಕಾಂಡೊಮ್ಸ್ ಬಳಕೆಯ ಮಹತ್ವ ಗೊತ್ತಿದೆ. ಜೊತೆಗೆ ದೇಶದ ಶೇ 94 ರಷ್ಟು ಪುರುಷರು ಇದರ ಬಗ್ಗೆ ತಿಳುವಳಿಕೆ ಹೊಂದಿದ್ದಾರೆ. ಅಷ್ಟೇ ಏಕೆ?
ಈ ರೀತಿಯ ನಿರಾಸಕ್ತಿಯನ್ನು ಕಡಿಮೆ ಮಾಡಲೆಂದೇ ಮಾರುಕಟ್ಟೆಯಲ್ಲಿ ಬನಾನ, ಚಾಕೋಲೆಟ್, ಪಾನ್, ಡಾಟೆಡ್, ಎಕ್ಸ್ ಟ್ರಾ ಡಾಟೆಡ್ ಹೀಗೆಲ್ಲಾ ವಿವಿಧ ಫ್ಲೇವರ್‌ಗಳಿರುವ ಕಾಂಡೋಮ್ ಗಳನ್ನು ತಯಾರು ಮಾಡಲಾಗಿದೆ. ಜೊತೆಗೆ ಬಾಲಿವುಡ್ ನಟರಾದ ರಣವೀರ್ ಸಿಂಗ್, ಜೊತೆಗೆ ಬಾಲಿವುಡ್ ಥೀಮ್ ಹೊಂದಿರುವ ಸುಹಾಗ್ ರಾತ್ ಸೀನ್ಸ್ ಅಥವಾ ದ್ವಂದ್ವಾರ್ಥ ಕೊಡುವ ಪಂಚ್ ಲೈನ್‌ಗಳಿರುವ ಜಾಹೀರಾತುಗಳು ಜನರ ಮನಸ್ಸನ್ನು ಕೊಂಚ ಬದಲಿಸಿ ಕಾಂಡೋಮ್ ಪ್ರೇರೇಪಿಸುವಲ್ಲೂ ಯಶ ಕಂಡಿವೆ.
ಕಳೆದ ತಿಂಗಳು ವಿಶ್ವ ಸಂಸ್ಥೆಯ ವರದಿಯೊಂದು, 2028ರಲ್ಲಿ ಭಾರತ, ಚೀನಾವನ್ನು ಹಿಂದಿಕ್ಕಲಿದ್ದು, ಜಗತ್ತಿನಲ್ಲೇ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವಾಗಲಿದೆ ಎಂದು ಎಚ್ಚರಿಸಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆ(2015-16) ರ ಪ್ರಕಾರ, ಶೇ 95 ರಷ್ಟು ವಿವಾಹಿತ (15- 49 ವಯೋಮಾನದವರು)ರಲ್ಲಿ ಫರ್ಟಿಲಿಟಿ (ಸಂತಾನ ಅನುಪಾತ) ಅತೀ ಹೆಚ್ಚು ಇದ್ದು ಅವರು ಕಾಂಡೋಮ್ಸ್ ಬಳಸುತ್ತಿಲ್ಲ.
ದೇಶದ ರಾಜ್ಯಗಳಲ್ಲಿ ಕಾಂಡೋಮ್ ಬಳಕೆ ಹೇಗಿದೆ?
ಆಂಧ್ರಪ್ರದೇಶದಲ್ಲಿ ಕಾಂಡೋಮ್‌ಗಳ ಬಳಕೆ ಅತೀ ಕಡಿಮೆ ಇದೆ. ಇಲ್ಲಿ 0.2 ಶೇ ಪುರುಷರು ಮಾತ್ರ ಕಾಂಡೋಮ್ ಬಳಕೆ ಮಾಡುತ್ತಿದ್ದಾರೆ. ತೆಲಂಗಾಣ (ಶೇ 0.5), ತಮಿಳುನಾಡು(ಶೇ 0.8), ಬಿಹಾರ(ಶೇ1 ಶೇ), ಕರ್ನಾಟಕ (ಶೇ1.3) ಬಳಕೆ ಮಾಡುತ್ತಿದ್ದಾರೆ.
ನೆರೆ ದೇಶಗಳಲ್ಲಿ ಹೇಗಿದೆ?
ಹಾಗೆ ನೋಡುವುದಾದ್ರೆ, ನೆರೆಯ ದೇಶಗಳಲ್ಲಿ ಕಾಂಡೋಮ್ ಬಳಕೆ ಭಾರತಕ್ಕಿಂತ ಹೆಚ್ಚಿದೆ.
ಭಾರತ (ಶೇ.5.6) ಪಾಕಿಸ್ತಾನದಲ್ಲಿ ಶೇ 9.9, ಮಾಲ್ಡೀವ್ಸ್ ( ಶೇ11.7) ಇರಾನ್ ( ಶೇ13.7), ಶ್ರೀಲಂಕಾ (ಶೇ 6.1) ಚೀನಾ (ಶೇ 8.3) ಕಾಂಡೋಮ್ ಬಳಕೆ ಮಾಡುತ್ತಿವೆ.ಇನ್ನು ಜಗತ್ತಿನ ವಿಚಾರಕ್ಕೆ ಬರೋದಾದ್ರೆ ಹಾಂಕಾಂಗ್ (ಶೇ 50.1 ), ಜಪಾನ್ (ಶೇ 46.1) ರಷ್ಯಾ (ಶೇ 25 ) ಯುಕೆ (ಶೇ 7) ಅಮೆರಿಕಾದಲ್ಲಿ ಶೇ 11 ರಷ್ಟು ಬಳಕೆ ಇದೆ.
ದೇಶದಲ್ಲಿ ಕಾಂಡೋಮ್ ಬಳಕೆ ಕಡಿಮೆಯಾಗೋದ್ರಿಂದ, ಕುಟುಂಬ ಯೋಜನೆಯ ಎಲ್ಲಾ ಹೊರೆ ಮಹಿಳೆಯರ ಮೇಲೆ ಬೀಳುತ್ತಿದೆ. ಇದರಿಂದ ಮಹಿಳೆಯರ ಮೇಲೆ ಒತ್ತಡ ಹೆಚ್ಚುತ್ತಿದೆ ಜೊತೆಗೆ ದೇಶದ ಜನಸಂಖ್ಯೆಯಲ್ಲೂ ಮಿತಿಮೀರಿದ ಏರಿಕೆ ಉಂಟಾಗುತ್ತಿದೆ.
ಕಾಂಡೋಮ್ ಬಳಕೆ ಏಕೆ?
ಅತ್ಯಂತ ಸರಳವಾಗಿ ಹೇಳುವುದಾದ್ರೆ, ಅನವಶ್ಯಕ ಗರ್ಭಧಾರಣೆಗೆ ತಡೆಯುವುದು ಮತ್ತು ಲೈಂಗಿಕ ಸಂಬಂಧಿ ಖಾಯಿಲೆ (STD) ಗಳನ್ನು ತಡೆಯುವ ಉದ್ದೇಶ ಹೊಂದಿದೆ. ಒಂದು ವೇಳೆ ವ್ಯಕ್ತಿಯೊಬ್ಬ ಅನೇಕ ಮಹಿಳೆಯರ ಜೊತೆ ಲೈಂಗಿಕ ಸಂಪರ್ಕ ಹೊಂದುವುದಾದ್ರೆ ಕಾಂಡೋಮ್ ಬಳಕೆ ಅತ್ಯಂತ ಅಗತ್ಯ.