ಭಾರತೀಯ ಆರೋಗ್ಯ ವ್ಯವಸ್ಥೆಗೆ ಆರೈಕೆ ಅಗತ್ಯವಿದೆ! ಭಾರತದಲ್ಲಿ ಆರೋಗ್ಯ ರಕ್ಷಣೆ ಕ್ಷೇತ್ರ ಸರ್ಕಾರದಿಂದ ಸಾಕಷ್ಟು ಧನಸಹಾಯ ಪಡೆದಿದ್ದರೂ ಕೂಡ ಇವತ್ತಿಗೂ ಅನೇಕ ಜನರಿಗೆ ತಲುಪಿಲ್ಲ ಎಂದು ನೀತಿ ಆಯೋಗದ ಇತ್ತೀಚಿನ ವರದಿ ಹೇಳಿದೆ.
ಶ್ರೀಮಂತ ಉದ್ಯಮಿ ಬಿಲಿಗೇಟ್ಸ್ ಭಾರತದಲ್ಲಿ ಸಾರ್ವಜನಿಕ ಆರೋಗ್ಯ ರಕ್ಷಣೆ ಕ್ಷೇತ್ರದ ಸ್ಥಿತಿ ಶೋಚನೀಯವಾಗಿದೆ ಎಂದು ಆಯೋಗದ ವರದಿ ತಿಳಿಸಿದೆ. ಸುಧಾರಿತ ಆರೋಗ್ಯ ವ್ಯವಸ್ಥೆಯನ್ನು ಸಾಧಿಸಲು ಹೊರಟಿರುವ ಭಾರತದ ಎದುರು ಹಲವಾರು ಸವಾಲುಗಳಿವೆ. ವಿಶ್ವದಾದ್ಯಂತ ಇತರ ರಾಷ್ಟ್ರಗಳು ತಮ್ಮ ನಾಗರಿಕರ ಆರೋಗ್ಯಕ್ಕಾಗಿ ಸಾಕಷ್ಟು ಖರ್ಚು ಮಾಡುತ್ತಿದ್ದರೆ, ಈ ವಿಷಯದಲ್ಲಿ ಭಾರತದ ಸ್ಥಿತಿ ಅತ್ಯಂತ ದುರ್ಬಲವಾಗಿದೆ. ಅಸಂಖ್ಯಾತ ಭಾರತೀಯರಿಗೆ ಇಂದಿಗೂ ಕೂಡ ಸರ್ಕಾರದ ಆರೋಗ್ಯ ಸೇವೆಗಳು ಸರಿಯಾಗಿ ತಲುಪುತ್ತಿಲ್ಲ. ನಮ್ಮ ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ದುಸ್ಥಿತಿಗೆ ನೀತಿ ಆಯೋಗದ ಇತ್ತೀಚಿನ ವರದಿ ಮತ್ತೊಂದು ಪುರಾವೆಯಂತಿದೆ ಎಂದು ಸೂಚಿಸಿದೆ.
ಹೊಸ ಭಾರತವನ್ನು ನಿರ್ಮಿಸುವ ತನ್ನ ಕಾರ್ಯ ಯೋಜನೆಯ ಭಾಗವಾಗಿ ನೀತಿ ಆಯೋಗ ಹಲವಾರು ಅತ್ಯಗತ್ಯ ಪ್ರದೇಶಗಳತ್ತ ದೃಷ್ಟಿ ಹಾಯಿಸಿದೆ. ಅದರಲ್ಲಿ ದೇಶದ ಆರೋಗ್ಯ ಸೇವಾ ಕ್ಷೇತ್ರವೂ ಒಂದು. ಜಿಡಿಪಿಯ ಅನುಪಾತದಲ್ಲಿ ತೆಗೆದುಕೊಂಡರೆ, ಶ್ರೀಲಂಕಾ, ಇಂಡೋನೇಷ್ಯಾ, ಈಜಿಪ್ಟ್ ಮತ್ತು ಫಿಲಿಪೈನ್ಸ್‌ನಂತಹ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದ ಆರೋಗ್ಯ ರಕ್ಷಣೆಯ ಒಟ್ಟು ವೆಚ್ಚ ತುಂಬ ಕಡಿಮೆಯಿದೆ. ವೈಯಕ್ತಿಕ ಆರೋಗ್ಯಕ್ಕೆ ನಾವು ವ್ಯಯಿಸುತ್ತಿರುವ ವೆಚ್ಚ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೇವಲ 18 ಪ್ರತಿ ಶತದಷ್ಟಿದೆ. ಆದರೆ, ರಾಷ್ಟ್ರಮಟ್ಟದಲ್ಲಿ, ಒಬ್ಬ ವ್ಯಕ್ತಿಯು ಒಟ್ಟು ವೈದ್ಯಕೀಯ ವೆಚ್ಚದ 63 ಪ್ರತಿಶತವನ್ನು ತಾನೇ ಭರಿಸುತ್ತಿದ್ದಾನೆ ಎಂದು ಹೇಳಿದೆ.
ಪ್ರತಿಷ್ಠಿತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ, ಈಗಾಗಲೇ ವಿವಿಧ ಸರ್ಕಾರಿ ಮತ್ತು ಖಾಸಗಿ ಆರೋಗ್ಯ ವಿಮೆಗಳ ವ್ಯಾಪ್ತಿಗೆ ಒಳಪಟ್ಟ ಶೇ.5ರಷ್ಟು ಜನರನ್ನು ಹೊರತುಪಡಿಸಿ, ಕೇವಲ ಶೇ.40ರಷ್ಟು ಜನಸಂಖ್ಯೆಯನ್ನು ಮಾತ್ರ ತಲುಪಿದೆ. ಈ ಅಂಕಿ ಅಂಶಗಳು ಬಹುಪಾಲು ಜನರಿಗೆ ಆರೋಗ್ಯ ಸೇವೆ ಲಭಿಸುತ್ತಿಲ್ಲ ಎಂದು ತೋರಿಸುತ್ತದೆ. ವೈದ್ಯಕೀಯ ಶುಲ್ಕಗಳು ಪ್ರತಿವರ್ಷ 6 ಕೋಟಿ ಜನರನ್ನು ಸಾಲದಲ್ಲಿ ಸಿಲುಕುವಂತೆ ಮಾಡುತ್ತಿದೆ ಎಂದು ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ವರದಿ ಬಹಿರಂಗಪಡಿಸಿದೆ. ಮತ್ತೊಂದೆಡೆ, ಸರಿಯಾದ ನಿರ್ದೇಶನಗಳು ಮತ್ತು ಮಾರ್ಗದರ್ಶನದ ಕೊರತೆಯಿಂದಾಗಿ ಆರೋಗ್ಯ ವಿಮೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗದ ಜನರಿದ್ದಾರೆ ಎಂದು ಹೇಳಿದೆ.
ಸಕಾಲಿಕ ವೈದ್ಯಕೀಯ ಸೇವೆಗಳು ಲಭ್ಯವಿಲ್ಲದೆ ವಾರ್ಷಿಕವಾಗಿ ಸುಮಾರು 24 ಲಕ್ಷ ಜನ ಸಾಯುತ್ತಿದ್ದಾರೆ. ದುಸ್ಥಿತಿಯಲ್ಲಿರುವ ದೇಶದ ಆರೋಗ್ಯ ಸೇವೆಯ ಸ್ಥಿತಿಯನ್ನು ಸುಧಾರಿಸಲು ಮತ್ತು ಈ ಕ್ಷೇತ್ರದಲ್ಲಿ
ಜನರ ವಿಶ್ವಾಸವನ್ನು ಗಳಿಸಲು ನೀತಿ ಆಯೋಗ ಹಲವಾರು ಸಲಹೆಗಳನ್ನು ನೀಡಿದೆ. 2030ರ ವೇಳೆಗೆ ಕನಿಷ್ಠ 10 ಲಕ್ಷ ನವಜಾತ ಶಿಶುಗಳ ಪ್ರಾಣವನ್ನು ಕಾಪಾಡುವುದು ಮತ್ತು ದುಡಿಯಲು ಶಕ್ತವಾಗಿರುವ ವೃದ್ಧರ ಮರಣ ಪ್ರಮಾಣವನ್ನು ಶೇ.16 ರಷ್ಟು ತಗ್ಗಿಸುವುದು, ಈ ಸಲಹೆಗಳಲ್ಲಿ ಪ್ರಮುಖವಾಗಿವೆ. ವೈದ್ಯಕೀಯ ಪ್ರವಾಸೋದ್ಯಮದ ಬೆಳವಣಿಗೆಯು ಕ್ಲೀಷೆಯಾಗಿ ತೋರುತ್ತದೆಯಾದರೂ, ನಾಗರಿಕರ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಆರೋಗ್ಯ ಪ್ರವೇಶ ಮತ್ತು ಗುಣಮಟ್ಟದ ವಿಷಯದಲ್ಲಿ ಸಮೀಕ್ಷೆ ನಡೆಸಿದ 195 ದೇಶಗಳಲ್ಲಿ, ಭಾರತ 145ನೇ ಸ್ಥಾನದಲ್ಲಿದೆ. ನಮ್ಮ ನೆರೆಹೊರೆಯ ಚೀನಾ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭೂತಾನ್ ನಮಗಿಂತ ಉತ್ತಮವಾದ ಸ್ಥಾನ ಪಡೆದಿವೆ. ಶೇ.20ರಷ್ಟು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಶೇ.30ರಷ್ಟು ಸಮುದಾಯ ಆರೋಗ್ಯ ಕೇಂದ್ರಗಳ ಕೊರತೆ ಇದೆ ಎಂದು ಕೇಂದ್ರ ಸರ್ಕಾರವೇ ಒಪ್ಪಿಕೊಂಡಿತ್ತು. ಭಾರತವು 20 ಲಕ್ಷ ವೈದ್ಯರು ಮತ್ತು 40 ಲಕ್ಷ ದಾದಿಯರ ಕೊರತೆಯನ್ನು ಎದುರಿಸುತ್ತಿದ್ದು, ಸುರಕ್ಷಿತ ಆರೋಗ್ಯ ಸಂರಕ್ಷಣೆಯ ಪರಿಕಲ್ಪನೆಗಿದು ನುಂಗಲಾರದ ತುತ್ತಾಗಿದೆ.
ಅಲೋಪತಿ ಚಿಕಿತ್ಸೆಯಲ್ಲಿ ಶೇ.57 ರಷ್ಟು ಅನರ್ಹ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸರ್ಕಾರ ಬಹಿರಂಗಪಡಿಸಿತ್ತು. ಇದರಿಂದಾಗಿ ಲಕ್ಷಾಂತರ ಜನರ ಆರೋಗ್ಯ ಅಪಾಯದಲ್ಲಿದೆ. ಅವರ
ಆರೋಗ್ಯ ಮತ್ತು ಹಣವನ್ನು ಉಳಿಸಲು, ತಕ್ಷಣವೇ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕು. ಮತ್ತೊಂದೆಡೆ 98 ಪ್ರತಿಶತ ಆಸ್ಪತ್ರೆಗಳಲ್ಲಿ 10ಕ್ಕಿಂತ ಕಡಿಮೆ ಸಿಬ್ಬಂದಿಯಿದ್ದಾರೆ ಎಂಬ ಸ್ಫೋಟಕ ಸಂಗತಿಯನ್ನು ನೀತಿ
ಆಯೋಗದ ವರದಿಯು ದೃಢಪಡಿಸಿದೆ. ಹಣವನ್ನು ಖರ್ಚು ಮಾಡಲು ಸಿದ್ಧವಿರುವವರಿಗೆ ಮಾತ್ರ ಸೂಕ್ತ ವೈದ್ಯಕೀಯ ಚಿಕಿತ್ಸೆ ಲಭ್ಯವಿದೆ ಎಂಬುದನ್ನು ದೇಶದ ವೈದ್ಯಕೀಯ ಕ್ಷೇತ್ರದ ಈ ಸ್ಥಿತಿ ಸಾಬೀತುಪಡಿಸುತ್ತದೆ.
ಆಸ್ಪತ್ರೆಗಳು ಮತ್ತು ವೈದ್ಯರು ಮುಖ್ಯವಾಗಿ ನಗರಗಳಲ್ಲಿ ಕೇಂದ್ರೀಕೃತವಾಗಿರುವುದರಿಂದ ಗ್ರಾಮೀಣ ಆರೋಗ್ಯ ರಕ್ಷಣೆ ಕ್ಷೇತ್ರ ಕುಂಟುತ್ತಿದೆ. ಆರೋಗ್ಯ ಸಂರಕ್ಷಣಾ ಕ್ಷೇತ್ರದಲ್ಲಿ ನಕಲಿ ವೈದ್ಯಕೀಯ ವಿಮೆಗಳ ಪ್ರಮಾಣ ಏರಿಕೆಯಾಗಲಿದೆ ಮತ್ತು ಸರ್ಕಾರಗಳು ಪರಿಸ್ಥಿತಿಯನ್ನು ನಿರ್ಲಕ್ಷಿಸುತ್ತಾ ಹೋದರೆ ಜನರು ಇದಕ್ಕೆ ದಂಡ ತೆರಬೇಕಾಗುತ್ತದೆ ಎಂದು ನೀತಿ ಆಯೋಗದ ವರದಿ, ದೇಶದ ಆಡಳಿತ ಯಂತ್ರಕ್ಕೆ ಎಚ್ಚರಿಕೆ ನೀಡಿದೆ. ಮಾನವ ಸಂಪನ್ಮೂಲ ಅಭಿವೃದ್ಧಿಗೆ ಉತ್ತಮ ಸಾರ್ವಜನಿಕ ಆರೋಗ್ಯ ಕಡ್ಡಾಯವಾಗಿದೆ ಎಂಬ ದೂರದೃಷ್ಟಿತ್ವದೊಂದಿಗೆ ದಕ್ಷಿಣ ಕೊರಿಯಾ, ಚೀನಾ, ಟರ್ಕಿ, ಪೆರು ಮತ್ತು ಮಾಲ್ಡೀವ್ಸ್‌ನಂತಹ ರಾಷ್ಟ್ರಗಳು ದೇಶದ ಆರೋಗ್ಯ ರಕ್ಷಣೆ ಕ್ಷೇತ್ರವನ್ನು ಸುವ್ಯವಸ್ಥಿತವಾಗಿಸಿವೆ.
ಕೆನಡಾ, ಕತಾರ್, ಫ್ರಾನ್ಸ್, ನಾರ್ವೆ ಮತ್ತು ನ್ಯೂಜಿಲೆಂಡ್ ಆರೋಗ್ಯ ಸೇವೆಗಳಲ್ಲಿ ಒಂದು ಉದಾಹರಣೆಯಾಗಿ ಬೆಳೆದಿವೆ. ಆರೋಗ್ಯ ಕ್ಷೇತ್ರದಲ್ಲಿ ಭಾರತ ಮತ್ತು ಮೇಲೆ ತಿಳಿಸಿದ ರಾಷ್ಟ್ರಗಳ ನಡುವಿನ ಅಂತರಕ್ಕೆ ಪ್ರಮುಖ ಕಾರಣವೆಂದರೆ ಸಂಪನ್ಮೂಲಗಳ ಕೊರತೆ. ಭಾರತದಲ್ಲಿ ತಲಾ ಆರೋಗ್ಯ ವೆಚ್ಚ 63 ಡಾಲರ್ (ರೂ .4,517), ಚೀನಾ 7 ಪಟ್ಟು ಹೆಚ್ಚು ಖರ್ಚು ಮಾಡುತ್ತದೆ. ಕ್ಯೂಬಾ, ಆಸ್ಟ್ರಿಯಾ, ಬೆಲ್ಜಿಯಂ ಮತ್ತು ಡೆನ್ಮಾರ್ಕ್‌ನಂತಹ
ದೇಶಗಳು ತಮ್ಮ ಜಿಡಿಪಿಯ 7-8 ಪ್ರತಿಶತವನ್ನು ಆರೋಗ್ಯ ರಕ್ಷಣೆಗಾಗಿ ಖರ್ಚು ಮಾಡುತ್ತಿದ್ದರೆ, ಭಾರತವು ಕೇವಲ ಶೇ.1.1 ರಷ್ಟನ್ನು ಮಾತ್ರ ಖರ್ಚು ಮಾಡುತ್ತಿದೆ.
ವೈಯಕ್ತಿಕ ಆರೋಗ್ಯ ಖರ್ಚಿನ ಪಾಲನ್ನು ಕಡಿಮೆ ಮಾಡುವ ಮೂಲಕ, ಇಟಲಿ, ಗ್ರೀಸ್ ಮತ್ತು ಹಾಂಗ್ ಕಾಂಗ್‌ನಂತಹ ರಾಷ್ಟ್ರಗಳು ಆರೋಗ್ಯ ಸೇವೆಯನ್ನು ಸುಧಾರಿಸಿವೆ. ಸ್ವಿಟ್ಜರ್ಲೆಂಡ್ ತನ್ನ ಎಲ್ಲಾ ನಾಗರಿಕರಿಗೆ ಆರೋಗ್ಯ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಆದರೆ, ಭಾರತ ಮಾತ್ರ ಇಂಥ ದಿಟ್ಟ ಹೆಜ್ಜೆ ಇಡುವಲ್ಲಿ ಎಡವುತ್ತಿದೆ. ಭಾರತವು ಪ್ರಾಥಮಿಕ ಆರೋಗ್ಯ ರಕ್ಷಣೆಯ ದೃಷ್ಟಿಯಿಂದ ಬಹಳ ಭರವಸೆ ಮೂಡಿಸುತ್ತಿದೆ ಮತ್ತು ಇತರ ದೇಶಗಳಿಗೆ ಉದಾಹರಣೆಯಾಗಿದೆ’’ ಎಂದು ಬಿಲ್ ಗೇಟ್ಸ್ ಹೇಳಿದ್ದಾರೆ.
ಈ ಮಾತುಗಳನ್ನು ನಿಜವಾಗಿಸಲು ಮತ್ತು ಸರ್ಕಾರಿ ಆಸ್ಪತ್ರೆಗಳ ಸೇವಾ ಗುಣಮಟ್ಟವನ್ನು ಸುಧಾರಿಸಲು ಮೊದಲಿಗೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಹಣವನ್ನು ನಿಗದಿಪಡಿಸಬೇಕು. ಸರ್ಕಾರಗಳು ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ ಮತ್ತು ಅದರ ಅನುಷ್ಠಾನಕ್ಕೆ ಬದ್ಧವಾಗಿರಬೇಕು. ಕಾಯಿಲೆಯಿಂದ ಬಳಲುತ್ತಿರುವ ವೈದ್ಯಕೀಯ ಸೇವೆಗಳಿಗೆ ಸರಿಯಾದ ಚಿಕಿತ್ಸೆ ನೀಡಿದಾಗ ಮಾತ್ರ, ಸಾರ್ವಜನಿಕ ಆರೋಗ್ಯದ ಸ್ಥಿತಿ ಸುಧಾರಣೆಯಾಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆಯಿಡುವ ತುರ್ತು ಅಗತ್ಯವಿದೆ.