ಕರ್ನಾಟಕ

karnataka

ETV Bharat / bharat

ಭಾರತ ಸರ್ಕಾರದ ಮಹತ್ವದ ನಿರ್ಧಾರ; ಪಾಕ್ ಕ್ರೀಡಾಳುಗಳಿಗೆ ಭಾರತದ ವೀಸಾ ತೊಡಕಿಲ್ಲ

ಭಾರತದಲ್ಲಿ ನಡೆಯುವ ಪಾಕ್ ಪ್ರಚೋದಿತ ಭಯೋತ್ಪಾದಕ ದಾಳಿ ಸೇರಿದಂತೆ ಇನ್ನಿತರ ಉಗ್ರ ಕೃತ್ಯಗಳಿಗೆ ಕುಮ್ಮುಕ್ಕು ವಿಚಾರವಾಗಿ ತೀವ್ರ ಆತಂಕಗೊಂಡಿದ್ದ ಭಾರತ ಇಲ್ಲಿ ನಡೆಯುತ್ತಿದ್ದ ಅಂತರಾಷ್ಚ್ರೀಯ ಮಟ್ಟದ ಕ್ರಿಡಾಕೂಟಗಳಲ್ಲಿ ಭಾಗವಹಿಸಲು ಪಾಕ್ ಆಟಗಾರರಿಗೆ ವೀಸಾ ತಡೆ ಹಿಡಿದಿತ್ತು. ಈ ನಿರ್ಧಾರದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೂ ಸ್ವಲ್ಪ ಮಟ್ಟಿನ ಹಿನ್ನಡೆಯಾಗಿತ್ತು.

ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ನರಿಂದರ್ ಭಾತ್ರಾ

By

Published : Jun 19, 2019, 8:14 AM IST

ನವದೆಹಲಿ: ಭಾರತದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಇನ್ನು ಮುಂದೆ ಪಾಕ್ ಆಟಗಾರರು ಪಾಲ್ಗೊಳ್ಳಬಹುದು. ಈ ಬಗ್ಗೆ ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಭಾರತೀಯ ಒಲಿಂಪಿಕ್ ಸಮಿತಿಗೆ ಭಾರತ ಲಿಖಿತ ಭರವಸೆ ನೀಡಿದೆ.

ಪಾಕ್ ಆಟಗಾರರು ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಅವಕಾಶ ನಿರಾಕರಿಸಿರುವ ಭಾರತದ ನಡೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಜೊತೆಗೆ ಭಾರತದಲ್ಲಿ ವಿಶ್ವ ಮಟ್ಟದ ಕ್ರೀಡಾಕೂಟಗಳನ್ನು ಆಯೋಜನೆ ಮಾಡುವುದಕ್ಕೂ ಹಿನ್ನೆಡೆಯಾಗಿತ್ತು. ಈ ವಿಚಾರಗಳನ್ನೆಲ್ಲಾ ಪರಿಗಣಿಸಿದ ಭಾರತ ಸರ್ಕಾರ ಇದೀಗ ಐಒಎ ಮತ್ತು ಐಒಸಿಗೆ ಪತ್ರ ಮುಖೇನ ಭರವಸೆ ನೀಡಿದ್ದು, ಪಾಕ್‌ ಸೇರಿದಂತೆ ಜಗತ್ತಿನ ಎಲ್ಲಾ ಆಟಗಾರರು ಇಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದಾಗಿ ತಿಳಿಸಿದೆ. ಈ ಪತ್ರವನ್ನು ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಅಧ್ಯಕ್ಷ ತಾಮಸ್ ಬಾಶ್ ಅವರಿಗೂ ಕಳುಹಿಸಿಕೊಡಲಾಗಿದೆ.

ಈ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ಗೆ ಭಾರತದ ಕ್ರೀಡಾ ಕಾರ್ಯದರ್ಶಿ ಬರೆದ ಪತ್ರದ ಸಾರಾಂಶ ಹೀಗಿದೆ. ಭಾರತ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳನ್ನು ಆಯೋಜಿಸಲಿದ್ದು, ಅಂತರಾಷ್ಟ್ರೀಯ ಒಲಿಂಪಿಕ್ ಸಮಿತಿ ಮಾನ್ಯತೆ ಪಡೆದ ಯಾವುದೇ ದೇಶದ ಒಲಿಂಪಿಕ್ ಸಮಿತಿಯ ಅರ್ಹ ಆಟಗಾರರು ಈ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗುವುದು. ಇದು ನಮ್ಮ ಸರ್ಕಾರದ ನೀತಿಯೂ ಆಗಿದ್ದು, ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅಥ್ಲೀಟ್‌ಗಳಿಗೆ ಯಾವುದೇ ರೀತಿ ಪಕ್ಷಪಾತ ಧೋರಣೆ ಮಾಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ.

ಈ ಮೂಲಕ ಪಾಕಿಸ್ತಾನ ಆಟಗಾರರು ಭಾರತದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಇಲ್ಲಿಯವರೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿದೆ.
ಸರ್ಕಾರದ ನಡೆಗೆ ಹರ್ಷ ವ್ಯಕ್ತಪಡಿಸಿರುವ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಅಧ್ಯಕ್ಷ ನರಿಂದರ್ ಭಾತ್ರಾ, ಕ್ರೀಡಾ ಸಚಿವ ಕಿರಣ್ ರಿಜುಜು ಮತ್ತು ಕ್ರೀಡಾ ಸಚಿವಾಲಯಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಕ್ರೀಡೆಗೆ ಸಂಬಂಧಿಸಿದಂತೆ ಮಹತ್ವದ ವಿವಾದ, ಗೊಂದಲ ಈ ಮೂಲಕ ಬಗೆಹರಿದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details