ಆಂಟಿಗುವಾ: ಭಾರತೀಯ ಜನತಾ ಪಾರ್ಟಿ ಹಿರಿಯ ಮುಖಂಡ ಹಾಗೂ ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ನಿಧನರಾಗಿದ್ದು, ಪ್ರಮುಖ ಗಣ್ಯರು ಅವರಿಗೆ ಸಂತಾಪ ಸೂಚಿಸಿದ್ದಾರೆ. ಇದರ ಮಧ್ಯೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಂತಾಪ ಸೂಚಿಸಲು ಮುಂದಾಗಿದೆ.
ಅರುಣ್ ಜೇಟ್ಲಿ ನಿಧನಕ್ಕೆ ಈಗಾಗಲೇ ಬಿಸಿಸಿಐ ಟ್ವೀಟ್ ಮೂಲಕ ಸಂತಾಸ ಸೂಚಿಸಿದ್ದು, ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟ, ಸಾವಿನ ನೋವನ್ನು ಭರಿಸುವ ಶಕ್ತಿಯನ್ನ ಅವರ ಕುಟುಂಬಕ್ಕೆ ದೇವರು ನೀಡಲಿ ಎಂದು ಟ್ವೀಟ್ ಮಾಡಿದೆ.
ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಟೆಸ್ಟ್ ಪಂದ್ಯದ ಮೂರನೇ ದಿನವಾದ ಇಂದು ಕೊಹ್ಲಿ ಪಡೆ ಕೈಗೆ ಕಪ್ಪು ಪಟ್ಟಿ ಕಟ್ಟಿ ಮೈದಾನಕ್ಕಿಳಿಯುವ ಮೂಲಕ ಅರುಣ್ ಜೇಟ್ಲಿಗೆ ಸಂತಾಪ ಸೂಚಿಸಲಿದೆ. ಇನ್ನು ಅರುಣ್ ಜೇಟ್ಲಿ ಈ ಹಿಂದೆ ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ) ಅಧ್ಯಕ್ಷರಾಗಿ ಸಹ ಸೇವೆ ಸಲ್ಲಿಸಿದ್ದು, ಬಿಸಿಸಿಐ ಉಪಾಧ್ಯಕ್ಷರಾಗಿ ಹಾಗೂ ಐಪಿಎಲ್ನ ಆಡಳಿತ ಮಂಡಳಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಮಾಜಿ ಸಚಿವ ಅರುಣ್ ಜೇಟ್ಲಿ ಇಂದು ಕೊನೆಯುಸಿರೆಳೆದಿದ್ದಾರೆ. ಅವರ ನಿಧನಕ್ಕೆ ಬಿಜೆಪಿ ಸೇರಿ ವಿವಿಧ ಪಕ್ಷದ ಮುಖಂಡರು ಕಂಬನಿ ಮಿಡಿದಿದ್ದಾರೆ. ನಾಳೆ ಮಧ್ಯಾಹ್ನ ಅವರ ಅಂತ್ಯಕ್ರಿಯೆ ನಡೆಯಲಿದೆ.