ನವದೆಹಲಿ:ಭಾರತೀಯ ಖಗೋಳ ವಿಜ್ಞಾನಿಗಳು ಬ್ರಹ್ಮಾಂಡದಲ್ಲಿರುವ ಅತ್ಯಂತ ದೂರದ ನಕ್ಷತ್ರಪುಂಜವನ್ನು ಕಂಡುಹಿಡಿದಿದ್ದು, ಇದು ಭೂಮಿಯಿಂದ 9.3 ಶತಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ ಎಂದು ಅಂದಾಜಿಸಲಾಗಿದೆ ಎಂದು ಬಾಹ್ಯಾಕಾಶ ಇಲಾಖೆ ತಿಳಿಸಿದೆ.
ಭಾರತೀಯ ಖಗೋಳಶಾಸ್ತ್ರಜ್ಞರು ಇಡೀ ಬ್ರಹ್ಮಾಂಡದಲ್ಲಿನ ಅತ್ಯಂತ ದೂರದಲ್ಲಿರುವ ನಕ್ಷತ್ರಪುಂಜಗಳಲ್ಲಿ ಒಂದನ್ನು ಕಂಡುಹಿಡಿದಿರುವುದು ಒಂದು ಸಾಧನೆಯಾಗಿದೆ. ನಾಸಾ ಸಂಸ್ಥೆಯು ಈ ವಿಶೇಷ ಸಾಧನೆಯಲ್ಲಿ ತೊಡಗಿರುವ ಸಂಶೋಧಕರನ್ನು ಅಭಿನಂದಿಸಿದೆ.
ನಾಸಾ ಸಾರ್ವಜನಿಕ ವ್ಯವಹಾರಗಳ ಅಧಿಕಾರಿ ಫೆಲಿಷಿಯಾ ಚೌ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ವಿಜ್ಞಾನ ಮತ್ತು ಹೊಸ ಹೊಸ ಆವಿಷ್ಕಾರಗಳು ಸಹಯೋಗದ ಪ್ರಯತ್ನವಾಗಿದೆ. ಈ ರೀತಿಯ ಆವಿಷ್ಕಾರಗಳು ಮನುಷ್ಯಕುಲದ ಬೆಳವಣಿಗೆಯನ್ನು ಸೂಚಿಸುತ್ತದೆ. ಅಂದರೆ ನಾವು ಎಲ್ಲಿಂದ, ಹೇಗೆ, ಎಲ್ಲಿಗೆ ಹೋಗುತ್ತಿದ್ದೇವೆ ಮತ್ತು ನಮ್ಮ ಅಭಿವೃದ್ಧಿ ಏನು ಎಂಬುದನ್ನು ತಿಳಿಸಿಕೊಡುತ್ತದೆ ಎಂದಿದ್ದಾರೆ.
ಕೇಂದ್ರ ರಾಜ್ಯ ಖಾತೆ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ಬಾಹ್ಯಾಕಾಶ ವೀಕ್ಷಣಾಲಯವು ಬಹು ದೂರದ ನಕ್ಷತ್ರಪುಂಜವನ್ನು ಪತ್ತೆ ಮಾಡಿರುವುದು ಹೆಮ್ಮೆಯ ವಿಷಯ ಎಂದಿದ್ದಾರೆ. AUDFs01 ಎಂಬ ಈ ನಕ್ಷತ್ರಪುಂಜವನ್ನು ಪುಣೆಯ ಇಂಟರ್ ಯೂನಿವರ್ಸಿಟಿ ಸೆಂಟರ್ ಫಾರ್ ಅಸ್ಟ್ರೋನಮಿ ಮತ್ತು ಅಸ್ಟ್ರೋಫಿಸಿಕ್ಸ್ (ಐಯುಸಿಎಎ)ನ ಡಾ. ಕನಕ್ ಸಹಾ ಅವರ ನೇತೃತ್ವದ ಖಗೋಳಶಾಸ್ತ್ರಜ್ಞರ ತಂಡ ಕಂಡುಹಿಡಿದಿದೆ ಎಂದು ತಿಳಿಸಿದರು.