ನವದೆಹಲಿ:ಗಡಿಯಲ್ಲಿ ಕ್ಯಾತೆ ತೆಗೆದು ಭಾರತೀಯ ಸೈನಿಕರ ಮೇಲೆ ಮುಗಿ ಬೀಳುವ ಚೀನಾಗೆ ಭಾರತದ ಸೇನಾ ಯೋಧರು ಮಾನವೀಯತೆಯ ಪಾಠ ಕಲಿಸಿದ್ದಾರೆ.
ಸೆಪ್ಟೆಂಬರ್ 3ರಂದು ಉತ್ತರ ಸಿಕ್ಕಿಂನ ಕಣಿವೆ ಪ್ರಸ್ಥಭೂಮಿ ಪ್ರದೇಶದಲ್ಲಿ 17,500 ಅಡಿ ಎತ್ತರದಲ್ಲಿ ದಾರಿ ತಪ್ಪಿದ ಮೂವರು ಚೀನಿ ಪ್ರಜೆಗಳನ್ನು ಭಾರತೀಯ ಸೇನೆಯ ಯೋಧರು ರಕ್ಷಿಸಿದ್ದಾರೆ.
ಹಾದಿ ತಪ್ಪಿ ಜೀವ ರಕ್ಷಣೆಗಾಗಿ ಎದುರು ನೋಡುತ್ತಿದ್ದ ಡ್ರ್ಯಾಗನ್ ಪ್ರಜೆಗಳನ್ನು ಭಾರತದ ಯೋಧರು ಕಾಪಾಡಿದ್ದಾರೆ. ಸಂತ್ರಸ್ತ ಚೀನಿಯರಿಗೆ ಆಮ್ಲಜನಕ, ಆಹಾರ ಮತ್ತು ಬೆಚ್ಚಗಿನ ಬಟ್ಟೆ ಸೇರಿದಂತೆ ವೈದ್ಯಕೀಯ ನೆರವು ನೀಡಿದ್ದಾರೆ. ಸೈನ್ಯವು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಬಳಿಕ ಅವರು ತಲುಪಬೇಕಾದ ಸ್ಥಳಕ್ಕೆ ಮರಳಿಸಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಚೀನಾ ಪ್ರಜೆಗಳನ್ನು ರಕ್ಷಿಸಿದ ಭಾರತೀಯ ಯೋಧರು ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿನ ಭಾರತೀಯ ಸೈನಿಕರ ಮೇಲೆ ಚೀನಾ ಪೂರ್ವಭಾವಿ ನಿಯೋಜಿತ ದಾಳಿ ನಡೆಸಿತ್ತು. ಈ ಹಿಂಸಾತ್ಮಕ ದಾಳಿಯಲ್ಲಿ ಭಾರತದ 20 ಮಂದಿ, ಚೀನಾದ 35 ಮಂದಿ ಸೈನಿಕರು ಸಾವನ್ನಪ್ಪಿದ್ದರು. ಬಳಿಕ ಉಭಯ ರಾಷ್ಟ್ರಗಳ ಗಡಿಯಲ್ಲಿ ಆತಂಕದ ಕಾರ್ಮೋಡ ಕವಿದಿದೆ.