ನವದೆಹಲಿ: ಭಾರತ ಹಾಗೂ ಚೀನಾ ನಡುವಿನ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ) ಬಳಿಯ ಗಡಿ ತಂಟೆ ಬಗೆಹರಿಸಲು ಉಭಯ ರಾಷ್ಟ್ರಗಳ ಕಮಾಂಡರ್‌ಗಳು ಭೇಟಿ ನೀಡಿದ್ದರು ಎಂಬುದು ತಿಳಿದು ಬಂದಿದೆ.
ಪೂರ್ವ ಲಡಾಕ್‌ನಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ತಗ್ಗಿಸಲು ಉನ್ನತ ಮಟ್ಟದ ಭಾರತೀಯ ಮತ್ತು ಚೀನಾದ ಮಿಲಿಟರಿ ಕಮಾಂಡರ್‌ಗಳು ಮೇ 22 ಮತ್ತು ಮೇ 23ರಂದು ಎಲ್‌ಎಸಿ ವ್ಯಾಪ್ತಿಯಲ್ಲಿ ಗೊತ್ತುಪಡಿಸಿದ ಸ್ಥಳಗಳಲ್ಲಿ ಭೇಟಿ ಮಾಡಿದ್ದರು ಎಂದು ಉನ್ನತ ಮೂಲಗಳು ಎಎನ್‌ಐಗೆ ತಿಳಿಸಿವೆ.
ಹಿರಿಯ ಮಿಲಿಟರಿ ಕಮಾಂಡರ್ ಮಟ್ಟದ ಮಾತುಕತೆಗಳ ಜೊತೆಗೆ ದೆಹಲಿ ಮತ್ತು ಬೀಜಿಂಗ್‌ನಲ್ಲಿನ ರಾಜತಾಂತ್ರಿಕ ಮಾರ್ಗಗಳ ಮೂಲಕ ಶಾಂತಿಯುತ ನಿರ್ಣಯಕ್ಕಾಗಿ ಕೆಲಸ ಮಾಡುತ್ತಿವೆ. ಭಾರತದ ಗಡಿಗಳ ಪಾವಿತ್ರ್ಯತೆ ಕಾಪಾಡಿಕೊಳ್ಳುವಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಭಾರತವು ಶಾಂತಿಯನ್ನು ನಂಬುತ್ತದೆಯಾದರೂ ತನ್ನ ಭೂಪ್ರದೇಶದ ರಕ್ಷಣೆಗೆ ಅದು ದೃಢವಾಗಿರುತ್ತದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ದಿನಗಳಿಂದ ಎರಡೂ ರಾಷ್ಟ್ರಗಳ ಗಡಿಯಲ್ಲಿ ಉಪಟಳ ಕಂಡುಬಂದಿತ್ತು. ಭಾರತ ಸೇನೆಯ 81 ಮನತ್ತು 114 ಬ್ರಿಗೆಡ್‌ಗಳ ಅಡಿಯಲ್ಲಿ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಚೀನಿ ಸೈನಿಕರು ಜಮಾವಣೆಗೊಳ್ಳುತ್ತಿದ್ದಾರೆ. ಓಲ್ಡಿ ಹಾಗೂ ಪ್ಯಾಂಗ್ಯಾಂಗ್ ತ್ಸೋ ಸರೋವರದ ಬಳಿಯೂ ಹೆಚ್ಚಿನ ಸಂಖ್ಯೆಯಲ್ಲಿ ಚೀನಿ ಸೈನಿಕರು ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಭಾರತ ಅರಿತಿತ್ತು. ಗಡಿ ಸುರಕ್ಷತೆಗಾಗಿ ಭಾರತ ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಸೈನ್ಯ ಜಮಾವಣೆ ಮಾಡಲು ನಿರ್ಧರಿಸಿತ್ತು.