ಬ್ಯಾಂಕಾಕ್:ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಒಪ್ಪಂದಕ್ಕೆ ಸೇರದಿರಲು ಭಾರತ ನಿರ್ಧರಿಸಿದೆ. ಆರ್‌ಸಿಇಪಿ ಒಪ್ಪಂದವು ಅದರ ಮೂಲ ಆಶಯವನ್ನು ಪ್ರತಿಬಿಂಬಿಸುವುದಿಲ್ಲ. ಫಲಿತಾಂಶವು ನ್ಯಾಯೋಚಿತ ಅಥವಾ ಸಮತೋಲಿತವಾಗಿಲ್ಲ ಎಂದು ಭಾರತ ನಿರ್ಧರಿಸಿದೆ.
ಭಾರತದಲ್ಲಿ ರೈತರು, ಸಣ್ಣಪುಟ್ಟ ಉದ್ದಿಮೆದಾರರು, ವ್ಯಾಪಾರಸ್ಥರು, ಕೈಗಾರಿಕೋದ್ಯಮಿಗಳು ಈ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತಿದ್ದಾರೆ. ಭಾರತೀಯರ ಒಳಿತನ್ನ ಗಮನದಲ್ಲಿ ಇಟ್ಟುಕೊಂಡು ಈ ಒಪ್ಪಂದವನ್ನ ಪರಿಶೀಲನೆ ನಡೆಸಿದಾಗ ನಮಗೆ ಉತ್ತಮ ಫಲಿತಾಂಶ ಸಿಗುತ್ತಿಲ್ಲ. ಹೀಗಾಗಿ ಆರ್‌ಸಿಇಪಿ ಒಪ್ಪಂದಕ್ಕೆ ಸೇರಲು ನನ್ನ ಆತ್ಮಸಾಕ್ಷಿ ಒಪ್ಪುತ್ತಿಲ್ಲ ಎಂದು ಮೋದಿ ತಿಳಿಸಿದ್ದಾರೆ.
ಆರ್‌ಸಿಇಪಿ ವಿಷಯದಲ್ಲಿ ಭಾರತ ಎತ್ತಿರುವ ಕಳವಳಗಳನ್ನು ನಾವು ಅರ್ಥಮಾಡಿಕೊಂಡಿದ್ದೇವೆ. ಆದರೆ ಇದಕ್ಕೆ ಸಂಬಂಧಪಟ್ಟಂತೆ ಎಲ್ಲರೂ ಕುಳಿತುಕೊಂಡು ಇರುವ ವ್ಯತ್ಯಾಸವನ್ನ ಸರಿಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ವಿಯೆಟ್ನಾಂ ರಾಯಭಾರಿ ಪಾಮ್ ಸಾನ್ ಚೌ ಹೇಳಿದ್ದಾರೆ.
ದೇಶಾದ್ಯಂತ ಆರ್‌ಸಿಇಪಿ ಒಪ್ಪಂದಕ್ಕೆ ವಿರೋಧ ಕೇಳಿಬಂದಿತ್ತು. ಪ್ರತಿಪಕ್ಷ ಕಾಂಗ್ರೆಸ್ ಕೂಡ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಆರ್‌ಸಿಇಪಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತೀಯ ರೈತರು ಮತ್ತು ಚಿಕ್ಕಪುಟ್ಟ ಉದ್ದಿಮೆದಾರರು, ಅಂಗಡಿಯವರನ್ನ ಬೀದಿಗೆ ತರುತ್ತಾರೆ ಎಂದು ಟೀಕಿಸಿದ್ದರು.
ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿದ್ದೇ ಆದರೆ ಲಕ್ಷಾಂತರ ಮಂದಿ ಬೀದಿಗೆ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿದೆ. ಈ ಮೂಲಕ ಕೋಟ್ಯಂತರ ಹೈನುಗಾರರ ಹಾಗೂ ಸಣ್ಣ ವ್ಯಾಪಾರಿಗಳ ಹಿತವನ್ನ ಪ್ರಧಾನಿ ಕಾಯುವ ಮೂಲಕ ಮಂದಹಾಸ ಮೂಡಿಸಿದ್ದಾರೆ.