ಹೈದರಾಬಾದ್: ಜೀನ್ ಡ್ರೋಜ್ ಬೆಲ್ಜಿಯಂ ಮೂಲದ ಭಾರತೀಯ ಅರ್ಥಶಾಸ್ತ್ರಜ್ಞ, ಹಸಿವು, ಕ್ಷಾಮ ಮತ್ತು ಸಾಮಾಜಿಕ ಅಸಮಾನತೆಯಂತಹ ಭಾರತ ಎದುರಿಸುತ್ತಿರುವ ಹಲವಾರು ಅಭಿವೃದ್ಧಿ ವಿಷಯಗಳ ಕುರಿತಂತೆ ಅವರು ಕಳೆದ ನಾಲ್ಕು ದಶಕಗಳಿಂದ ಕೆಲಸ ಮಾಡುತ್ತಿದ್ದಾರೆ. ತಮ್ಮ ಊರುಗಳಿಗೆ ಮರಳಿ ಹೋಗುತ್ತಿರುವ ಅತಿಥಿ ( ವಲಸೆ ) ಕಾರ್ಮಿಕರಿಗೆ ಆಹಾರ ಮತ್ತು ಆರ್ಥಿಕ ಭದ್ರತೆ ಒದಗಿಸುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜವಾಬ್ದಾರಿ ಆಗಿದೆ ಎಂಬುದು ಡ್ರೋಜ್ ಅವರ ನಂಬಿಕೆ. ಡ್ರೋಜ್ ಪ್ರಸ್ತುತ ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಗೌರವ ಪ್ರಾಧ್ಯಾಪಕರಾಗಿ ಮತ್ತು ರಾಂಚಿ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಡವರಿಗೆ ಆಹಾರ ಧಾನ್ಯಗಳನ್ನು ವಿತರಿಸುವುದು, ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲಪಡಿಸುವುದು ಹಾಗೂ ಉದ್ಯೋಗ ಖಾತರಿ ಯೋಜನೆಗಳನ್ನು ಜಾರಿಗೊಳಿಸುವುದು ಮುಂತಾದ ಹಲವಾರು ಕ್ರಮಗಳನ್ನು ಅವರು ಸೂಚಿಸಿದ್ದಾರೆ. ಈನಾಡು ಸಮೂಹದ ವಿಶೇಷ ವರದಿಗಾರ ಎಂ. ಎಲ್. ನರಸಿಂಹ ರೆಡ್ಡಿ ಅವರಿಗೆ ನೀಡಿದ ಸಂದರ್ಶನದಲ್ಲಿ ಅತಿಥಿ ಕಾರ್ಮಿಕರಿಗೆ ಸಂಬಂಧಿಸಿದ ಹಲವಾರು ವಿಷಯಗಳ ಕುರಿತು ಡ್ರೋಜ್ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಲಾಕ್‌ಡೌನ್ ನಂತರ, ಭಾರತದಲ್ಲಿ ಆಹಾರ ಬಿಕ್ಕಟ್ಟಿನ ವ್ಯಾಪ್ತಿ ಹೇಗೆ ಇರಲಿದೆ ?
ಸಾರ್ವಜನಿಕ ವಿತರಣಾ ವ್ಯವಸ್ಥೆ ( ಪಿ ಡಿ ಎಸ್ ) ಹಸಿವನ್ನು ದೊಡ್ಡ ಪ್ರಮಾಣದಲ್ಲಿ ತಡೆಯಬಹುದು. ಮೂರು ತಿಂಗಳ ತನಕ ಸಬ್ಸಿಡಿಯುಕ್ತ ಆಹಾರ ಧಾನ್ಯಗಳ ಪ್ರಮಾಣವನ್ನು ದ್ವಿಗುಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಒಂದು ಉತ್ತಮ ಕ್ರಮವಾಗಿದೆ. ಆದರೆ ಪಿ ಡಿ ಎಸ್ ವ್ಯಾಪ್ತಿಯ ಆಚೆಗೆ 50 ಕೋಟಿ ಜನರು ಇದ್ದಾರೆ. ಇವರೆಲ್ಲರೂ ಬಡವರಲ್ಲ. ಆದರೆ ಇವರಲ್ಲಿ ಹೆಚ್ಚಿನವರು ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಬಡತನ ರೇಖೆಗಿಂತ ಕೆಳಗೆ ಇಳಿಯಬಹುದು. ಜಾರ್ಖಂಡ್‌ನಲ್ಲಿ ಪಡಿತರ ಚೀಟಿ ಸೌಲಭ್ಯ ಇಲ್ಲದ ಸಾವಿರಾರು ಬಡಜನರು ಇದ್ದಾರೆ. ಆಹಾರ ಬಿಕ್ಕಟ್ಟಿನ ವ್ಯಾಪ್ತಿ ಹೇಗಿರಲಿದೆ ಎಂದು ಅಂದಾಜಿಸುವುದು ಕಷ್ಟ. ಆದರೆ ನಾವು ನಿರ್ಣಾಯಕ ಘಟ್ಟದತ್ತ ಸಾಗುತ್ತಿದ್ದೇವೆ. ಅದನ್ನು ತಡೆಯಬೇಕಾದರೆ ಈ ಎಲ್ಲಾ ಕುಟುಂಬಗಳನ್ನು ಪಿ ಡಿ ಎಸ್ ವ್ಯಾಪ್ತಿಗೆ ಸೇರಿಸಬೇಕು. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದಲ್ಲಿ ( ಎಫ್ ಸಿ ಐ ) ಬೃಹತ್ ಆಹಾರ ದಾಸ್ತಾನು ಇದೆ. ಈ ಆಹಾರ ಧಾನ್ಯಗಳನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು.
ಅತಿಥಿ ಕಾರ್ಮಿಕರ ಸುರಕ್ಷತೆ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅಗತ್ಯ ಕ್ರಮ ತೆಗೆದುಕೊಳ್ಳುತ್ತಿವೆಯೇ?
ರಾಜ್ಯ ಸರ್ಕಾರಗಳು ನಡೆಸುವ ಪುನರ್ವಸತಿ ಚಟುವಟಿಕೆಗಳಿಗೆ ಬೆಂಬಲ ನೀಡುವ ಮೂಲಕ ಕೇಂದ್ರ ಸರ್ಕಾರ ಸಾಕಷ್ಟು ಉತ್ತಮವಾಗಿ ಕೆಲಸ ಮಾಡುತ್ತಿದೆ. ಇದು ರಾಜ್ಯಗಳಿಗೆ ಆಹಾರ ದಾಸ್ತಾನು ಪೂರೈಸಬೇಕು ಮತ್ತು ಪಡಿತರ ರಹಿತ ಕಾರ್ಡ್ ಹೊಂದಿರುವವರಿಗೆ ಆಹಾರ ಧಾನ್ಯಗಳನ್ನು ವಿತರಿಸಬೇಕು. ಆದಾಯ ಕುಸಿಯುತ್ತಾ ಇರುವುದರಿಂದ, ಕೇಂದ್ರ ಸರ್ಕಾರ ರಾಜ್ಯಗಳಿಗೆ ತನ್ನ ಆರ್ಥಿಕ ಸಹಾಯ ಹೆಚ್ಚಿಸಬೇಕು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಅಡಿ ಉದ್ಯೋಗಾವಕಾಶಗಳನ್ನು ಒದಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮನ್ವಯ ಸಾಧಿಸಬೇಕು. ಪ್ರಸ್ತುತ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಲು ಪಿ ಡಿ ಎಸ್, ಪಿಂಚಣಿ ಹಾಗೂ ಉದ್ಯೋಗ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳು ಬಡವರಿಗೆ ಸಹಾಯ ಮಾಡುತ್ತವೆ. ಸಾರ್ವಜನಿಕ ಅಡಿಗೆ ಮನೆಗಳ ಸ್ಥಾಪನೆ ಮತ್ತು ಫಲಾನುಭವಿಗಳ ಖಾತೆಗಳಿಗೆ ಹಣ ವರ್ಗಾವಣೆ ಮುಂತಾದ ಕಲ್ಯಾಣ ಚಟುವಟಿಕೆಗಳು ಸಹಕಾರಿ ಆಗುತ್ತವೆ. ಅಸ್ತಿತ್ವದಲ್ಲಿ ಇರುವ ಕಲ್ಯಾಣ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ತರಬೇಕು.
ಆಧುನಿಕ ಭಾರತದ ಇತಿಹಾಸದಲ್ಲಿ ಆಹಾರ ಬಿಕ್ಕಟ್ಟು ಇಷ್ಟು ತೀವ್ರವಾಗಿ ಕಂಡುಬಂದದ್ದು ಇದೆಯೇ?
ಸ್ವಾತಂತ್ರ್ಯ ಪಡೆಯುವ ಮೊದಲು, ಭಾರತ ಬಂಗಾಳ ಕ್ಷಾಮಕ್ಕೆ ಸಾಕ್ಷಿ ಆಯಿತು. ಅದು ನಾವು ಈಗ ನೋಡುತ್ತಿರುವುದಕ್ಕಿಂತ ಕೆಟ್ಟದಾಗಿ ತ್ತು. ಅದರ ನಂತರ, ಬರಗಾಲದ ಪರಿಣಾಮವಾಗಿ ಆಗಾಗ ಆಹಾರದ ಕೊರತೆ ಸಂಭವಿಸಿದೆ. 1966 - 67ರ ಅವಧಿಯಲ್ಲಿ ಬಿಹಾರದಲ್ಲಿ ದೊಡ್ಡಮಟ್ಟದ ಬರ ಕಾಣಿಸಿಕೊಂಡಿತ್ತು. ಸ್ವಾತಂತ್ರ್ಯದ ನಂತರದ ಕಾಲಘಟ್ಟದಲ್ಲಿ, ಈಗಿನ ಆಹಾರ ಬಿಕ್ಕಟ್ಟು ಅತ್ಯಂತ ಕೆಟ್ಟದು.