ನವದೆಹಲಿ: ಲಡಾಖ್ನ ಗಾಲ್ವನ್ ಕಣಿವೆ ಸಂಘರ್ಷದಲ್ಲಿ ಚೀನಾ ಗುಂಡಿಗೆ ಭಾರತದ 22 ಯೋಧರು ಹುತಾತ್ಮರಾಗಿದ್ದು, ಚೀನಾಗೆ ಭಾರತ ವ್ಯಾಪಾರ-ವಹಿವಾಟು ಹಾಗೂ ಕೆಲವೊಂದು ಯೋಜನೆ ನಿಷೇಧ ಮಾಡುವ ಮೂಲಕ ತಿರುಗೇಟು ನೀಡುತ್ತಿದೆ. ಇದೀಗ ಕೇಂದ್ರ ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಕಳೆದ ಕೆಲ ದಿನಗಳ ಹಿಂದೆ ಕೇಂದ್ರ ರೈಲ್ವೆ ಇಲಾಖೆ ಡ್ರ್ಯಾಗನ್ ದೇಶದೊಂದಿಗಿನ 470 ಕೋಟಿ ರೂ. ಒಪ್ಪಂದ ಮುರಿದುಕೊಂಡಿತ್ತು. ಜೊತೆಗೆ ಅಲ್ಲಿನ 59 ಆ್ಯಪ್ ಬ್ಯಾನ್ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಹಾಕಿದೆ. ಇದೀಗ ಜಂಟಿ ಉದ್ಯಮ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಯೋಜನೆಗಳಲ್ಲಿ ಚೀನಾ ಕಂಪೆನಿಗಳಿಗೆ ನಾವು ಅವಕಾಶ ನೀಡುವುದಿಲ್ಲ ಎಂದಿರುವ ಕೇಂದ್ರ ಹೆದ್ದಾರಿ ಮತ್ತು ಸಾರಿಗೆ ಸಚಿವ ನಿತಿನ್ ಗಡ್ಕರಿ, ಸಂಪೂರ್ಣವಾಗಿ ನಿಷೇಧ ಹೇರಲಾಗುವುದು ಎಂದು ತಿಳಿಸಿದ್ದಾರೆ.