ನವದೆಹಲಿ: ಪಾಕಿಸ್ತಾನದ ಇಸ್ಲಾಮಾಬಾದ್ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಪಾಕಿಸ್ತಾನ ಸರ್ಕಾರ ಬಂಧಿಸಿರುವ ಕ್ರಮಕ್ಕೆ ಭಾರತ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ನವದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರ ಕಚೇರಿಯ ಹಂಗಾಮಿ ರಾಯಭಾರಿ ಸೈಯದ್ ಹೈದರ್ ಶಾ ಅವರನ್ನು ತನ್ನ ಕಚೇರಿಗೆ ಕರೆಸಿದ ವಿದೇಶಾಂಗ ಇಲಾಖೆ, ಪಾಕ್ನಲ್ಲಿರುವ ತನ್ನ ಅಧಿಕಾರಿಗಳನ್ನು ಕೂಡಲೇ ಬಿಡುಗಡೆ ಮಾಡುವಂತೆ ಸೂಚನೆ ನೀಡಿದೆ.
"ಭಾರತೀಯ ಅಧಿಕಾರಿಗಳನ್ನು ಯಾವುದೇ ರೀತಿಯಿಂದ ವಿಚಾರಣೆ ಮಾಡಕೂಡದು ಹಾಗೂ ಅವರಿಗೆ ಯಾವುದೇ ಕಿರುಕುಳ ನೀಡಕೂಡದು. ಅವರ ಸಂಪೂರ್ಣ ಸುರಕ್ಷತೆಯ ಜವಾಬ್ದಾರಿ ಪಾಕಿಸ್ತಾನದ ಸಂಬಂಧಿಸಿದ ಅಧಿಕಾರಿಗಳ ಮೇಲಿದೆ." ಎಂದು ಪಾಕ್ ರಾಯಭಾರಿ ಸೈಯದ್ ಹೈದರ್ ಶಾ ಅವರಿಗೆ ಭಾರತ ತಿಳಿಸಿದೆ.