ನವದೆಹಲಿ:ಮುಸ್ಲಿಂ ರಾಷ್ಟ್ರಗಳು ಹಾಗೂ ಫ್ರಾನ್ಸ್ನ ನಡುವೆ ಧಾರ್ಮಿಕ ಸಂಘರ್ಷ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಫ್ರಾನ್ಸ್ ನಿಲುವಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಭಾರತದ ವಿದೇಶಾಂಗ ಇಲಾಖೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.
ಇಸ್ಲಾಂ ಮೂಲಭೂತವಾದ ಬೆಂಬಲಿತರು ಫ್ರೆಂಚ್ ಅಧ್ಯಕ್ಷ ಇಮ್ಮಾನ್ಯುವೆಲ್ ಮ್ಯಾಕ್ರೋನ್ ಅವರ ವಿರುದ್ಧದ ವೈಯಕ್ತಿಕ ದಾಳಿ ನಡೆಸಿದ್ದನ್ನು ಖಂಡಿಸಿದ ಭಾರತ ಅಂತಾರಾಷ್ಟ್ರೀಯ ನಿಯಮಗಳನ್ನು ಕೆಲವು ರಾಷ್ಟ್ರಗಳು ಉಲ್ಲಂಘಿಸುತ್ತಿವೆ ಎಂದು ಆರೋಪಿಸಿದೆ.
ಯಾವುದೇ ಕಾರಣಕ್ಕೂ ಅಥವಾ ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಗೆ ಯಾವುದೇ ಸಮರ್ಥನೆಯನ್ನು ನೀಡಬಾರದು ಎಂದು ವಿದೇಶಾಂಗ ಇಲಾಖೆ ಹೇಳಿಕೊಂಡಿದ್ದು, ಫ್ರಾನ್ಸ್ನಲ್ಲಿ ಹತ್ಯೆಯಾದ ಶಿಕ್ಷಕನಿಗೆ ಸಂತಾಪ ಸೂಚಿಸಿದೆ.
ಏನಿದು ವಿವಾದ..?
ಕೆಲವು ದಿನಗಳ ಹಿಂದೆ ಫ್ರಾನ್ಸ್ನಲ್ಲಿ ಶಿಕ್ಷಕರೊಬ್ಬರು ತರಗತಿಯಲ್ಲಿ ಪಾಠ ಮಾಡುವಾಗ ಪ್ರವಾದಿ ಮಹಮದ್ರ ವ್ಯಂಗ್ಯ ಚಿತ್ರಗಳನ್ನು ಪ್ರದರ್ಶಿಸಿದ್ದರು ಎಂಬ ಕಾರಣಕ್ಕೆ ವಲಸಿಗ ವ್ಯಕ್ತಿ ಆ ಶಿಕ್ಷಕನನ್ನು ಅಕ್ಟೋಬರ್ 10ರಂದು ಕೊಂದಿದ್ದನು. ಕೆಲವು ದಿನಗಳ ನಂತರ ಆತನನ್ನು ಫ್ರಾನ್ಸ್ ಪೊಲೀಸರು ಹತ್ಯೆ ಮಾಡಿದ್ದರು.
ವಿಶ್ವದಾದ್ಯಂತ ಶಿಕ್ಷಕನ ವಿರುದ್ಧ ಪ್ರತಿಭಟನೆಗಳ ಆರಂಭವಾದವು. ಫ್ರಾನ್ಸ್ ಅಧ್ಯಕ್ಷ ಇಸ್ಲಾಂ ವಿರುದ್ಧ ದೃಢ ನಿಲುವು ತೆಗೆದುಕೊಂಡಿದ್ದರು. ಮತ್ತೊಂದೆಡೆ, ಅತಿ ಮುಖ್ಯವಾಗಿ ಮುಸ್ಲಿಂ ರಾಷ್ಟ್ರಗಳಲ್ಲಿ ಫ್ರಾನ್ಸ್ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಟರ್ಕಿಯ ಅಧ್ಯಕ್ಷ ಎರ್ಡೋಗನ್ ವಿರುದ್ಧ ಹರಿಹಾಯ್ದಿದ್ದು, ಎಮ್ಯಾನ್ಯುಯಲ್ ಮಾಕ್ರೋನ್ ಮಾನಸಿಕ ಆರೋಗ್ಯದ ಬಗ್ಗೆ ವ್ಯಂಗ್ಯವಾಡಿದ್ದರು.
ಈ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ರಾಜಕೀಯ ಸಂಬಂಧವೂ ಹದೆಗೆಟ್ಟಿತ್ತು. ಫ್ರೆಂಚ್ ವಸ್ತುಗಳನ್ನು ಟರ್ಕಿ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿತ್ತು. ಫ್ರಾನ್ಸ್ ಉಗ್ರ ಇಸ್ಲಾಂ ಪ್ರತಿಪಾದನೆಯನ್ನು ಖಂಡಿಸಿದ್ದು, ವಿಶ್ವದಾದ್ಯಂತ ಮುಸ್ಲಿಂ ರಾಷ್ಟ್ರಗಳ ವಿರೋಧಕ್ಕೆ ಕಾರಣವಾಗಿತ್ತು.
ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಫ್ರಾನ್ಸ್ನ ನಿರ್ಧಾರಕ್ಕೆ ಬೆಂಬಲ ಸೂಚಿಸಿವೆ.