ನವದೆಹಲಿ :ಲಡಾಖ್‌ನ ದೌಲತ್ ಬೇಗ್ ಓಲ್ಡಿ (ಡಿಬಿಒ) ಮತ್ತು ಡೆಪ್ಸಾಂಗ್ನಲ್ಲಿ ಚೀನಾ 17 ಸಾವಿರಕ್ಕೂ ಹೆಚ್ಚು ಸೈನಿಕರನ್ನು ಚೀನಾ ನಿಯೋಜಿಸಿರುವ ಹಿನ್ನೆಲೆ ಭಾರತವೂ ಕೂಡ ತಕ್ಕ ಪ್ರತ್ಯುತ್ತರ ನೀಡಲು ಮುಂದಾಗಿದೆ.
ಲಡಾಖ್ ಗಡಿಯ ಅದೇ ಭಾಗದಲ್ಲಿ ಶಸ್ತ್ರಸಜ್ಜಿತ ವಿಭಾಗದ ಭಾಗವಾಗಿರುವ ಟಿ-90 ರೆಜಿಮೆಂಟ್‌ಗಳನ್ನು ಹಾಗೂ ಡಿಬಿಒ ಹಾಗೂ ಡೆಪ್ಸಾಂಗ್ ಮೈದಾನದಲ್ಲಿ ಸೈನ್ಯ ಹಾಗೂ ಟ್ಯಾಂಕರ್‌ಗಳನ್ನು ನಿಯೋಜಿಸಿದ್ದೇವೆ ಎಂದು ಸರ್ಕಾರದ ಮೂಲಗಳು ಮಾಹಿತಿ ನೀಡಿವೆ.
ಏಪ್ರಿಲ್ ಹಾಗೂ ಮೇ ತಿಂಗಳ ಅವಧಿಯಲ್ಲಿ ಕಾರಾಕೋರಂ ಶ್ರೇಣಿಯ ಬಳಿಯಿರುವ ಪ್ಯಾಟ್ರೋಲಿಂಗ್ ಪಾಯಿಂಟ್‌ವೊಂದರಲ್ಲಿ ಚೀನಾ 17 ಸಾವಿರ ಸೈನಿಕರನ್ನು ನಿಯೋಜಿಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ 15 ಸಾವಿರ ಸೈನಿಕರನ್ನು ಹಾಗೂ ಕೆಲವು ಟ್ಯಾಂಕ್ಗಳನ್ನು ಸೋಮವಾರ ನಿಯೋಜಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಚೀನಾ ಈ ಭಾಗದಲ್ಲಿ ಸೇನೆ ನಿಯೋಜನೆ ಮಾಡುವ ಉದ್ದೇಶವೇನೆಂದರೆ ಟಿಡಬ್ಲ್ಯುಡಿ ಬೆಟಾಲಿಯನ್ ಪ್ರಧಾನ ಕಚೇರಿಯಿಂದ ಡಿಬಿಒ ಸೆಕ್ಟರ್ ಎದುರು ಕಾರಾಕೋರಂ ಶ್ರೇಣಿ ಪ್ರದೇಶಕ್ಕೆ ರಸ್ತೆ ನಿರ್ಮಿಸುವುದು ಮತ್ತು ಅಲ್ಲಿನ ಬೆಟಾಲಿಯನ್ ಸಂಪರ್ಕಿಸುವುದಾಗಿದೆ. ಸುಮಾರು 15 ಗಂಟೆಗಳ ಪ್ರಯಾಣದ ಅವಧಿ ಈ ರಸ್ತೆಯ ಮೂಲಕ ಕೆಲವೇ ಗಂಟೆಗಳಿಗೆ ಇಳಿಯುತ್ತದೆ ಎಂಬುದು ಅದರ ಉದ್ದೇಶ.
ಕೆಲವೇ ವರ್ಷಗಳ ಹಿಂದೆ ಚೀನಾ ಪ್ಯಾಟ್ರೋಲಿಂಗ್ ಪಾಯಿಂಟ್ 8 ಹಾಗೂ 9ರ ಬಳಿ ಸಣ್ಣ ಸೇತುವೆ ನಿರ್ಮಿಸಿದ್ದು, ಇದನ್ನು ಭಾರತೀಯ ಸೈನಿಕರು ನಾಶಪಡಿಸಿದ್ದರು. ಭಾರತ, ಚೀನಾ ಸಂಘರ್ಷದ ನಂತರ ಗಾಲ್ವಾನ್ ಕಣಿವೆ ಹಾಗೂ ಕೆಲವು ಪ್ರದೇಶಗಳಲ್ಲಿ ಸೇನೆ ಹಿಂತೆಗೆತಕ್ಕೆ ಚೀನಾ ಒಪ್ಪಿಗೆ ಸೂಚಿಸಿತ್ತು. ಆದರೆ, ಈಗ ಬೇರೆ ಬೇರೆ ಪ್ರದೇಶಗಳಲ್ಲಿ ಹೆಚ್ಚು ಸೇನೆ ಜಮಾವಣೆ ಮಾಡುತ್ತಿದ್ದು, ಒಪ್ಪಂದ ಮತ್ತು ಮಾತುಕತೆಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿರುವುದು ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ.