ಕರ್ನಾಟಕ

karnataka

ETV Bharat / bharat

ಇನ್ನಾದರೂ ತಂಬಾಕು ಮುಕ್ತವಾಗುತ್ತಾ ಭಾರತ....? ಇದು ಸಾಧ್ಯವೇ? - ಸುಪ್ರೀಂ ಕೋರ್ಟ್

ಭಾರತದಲ್ಲಿ ತಂಬಾಕು ಸೇವಿಸುವವರ ಸಂಖ್ಯೆ ಅಗಾಧವಾಗಿದೆ. ಉತ್ತರ ಪ್ರದೇಶದ 24 ಕೋಟಿ ಜನಸಂಖ್ಯೆಯಲ್ಲಿ 5.3 ಕೋಟಿ ಜನ ಒಂದಿಲ್ಲೊಂದು ರೀತಿಯಲ್ಲಿ ತಂಬಾಕು ಸೇವಿಸುತ್ತಾರೆ ಎಂದು ಗ್ಲೋಬಲ್ ಅಡಲ್ಟ್​ ಟೊಬ್ಯಾಕೊ ಸರ್ವೆ ತಿಳಿಸಿದೆ. ತಂಬಾಕು ಚಟ ಇದ್ದವರಿಗೆ ಕೋವಿಡ್​-19 ಸೋಂಕು ತಗಲುವ ಸಾಧ್ಯತೆಗಳು ಹೆಚ್ಚು ಎಂಬುದು ಸಹ ಇತ್ತೀಚೆಗೆ ತಿಳಿದಿದೆ. ಧೂಮಪಾನಿಗಳಿಗೆ ನ್ಯುಮೋನಿಯಾ ಬರುವ ಸಾಧ್ಯತೆ ಇತರರಿಗಿಂತ 14 ಪಟ್ಟು ಜಾಸ್ತಿಯಂತೆ. ತಂಬಾಕಿನಿಂದ ಇಷ್ಟೆಲ್ಲ ಹಾನಿಯಾಗುತ್ತಿರುವಾಗ ಸಂಪೂರ್ಣ ತಂಬಾಕು ನಿಷೇಧ ಯಾವಾಗ ಎಂಬ ಕೂಗು ಮತ್ತೆ ಕೇಳಿ ಬಂದಿದೆ.

INDIA SHOULD BAN TOBACCO!
INDIA SHOULD BAN TOBACCO!

By

Published : Apr 14, 2020, 4:45 PM IST

ಕೊರೊನಾ ವೈರಸ್​​ನ ಕಪಿಮುಷ್ಟಿಯಿಂದ ತನ್ನ ಜನರನ್ನು ಕಾಪಾಡಲು ವಿಶ್ವದ ಎಲ್ಲ ದೇಶಗಳು ಹರಸಾಹಸ ಮಾಡುತ್ತಿವೆ. ಕೊರೊನಾ ಮಹಾಮಾರಿ ಇಲ್ಲಿಯವರೆಗೆ ಜಗತ್ತಿನಾದ್ಯಂತ ಸುಮಾರು 1,16,000 ಜನರನ್ನು ಬಲಿಪಡೆದಿದ್ದು, 18,00,000 ಜನರನ್ನು ಬಾಧಿಸುತ್ತಿದೆ. ಕೊರೊನಾ ಹರಡುತ್ತಿರುವುದು ತಿಳಿಯುತ್ತಿರುವಂತೆಯೇ ಸಂಪೂರ್ಣ ಲಾಕ್​ಡೌನ್​ ಘೋಷಿಸಿದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು.

ಮೂರು ವಾರಗಳ ಲಾಕ್​ಡೌನ್​ನಿಂದ ಅಂದಾಜು 8,20,000 ಭಾರತೀಯರ ಪ್ರಾಣ ಉಳಿಸಲು ಸಾಧ್ಯವಾಯಿತು ಎಂದು ಕೇಂದ್ರ ಸರಕಾರ ಹೇಳಿದ್ದು ಗಮನಾರ್ಹ. ಕೊರೊನಾ ಸೋಂಕಿನ ತಡೆಗೆ ಮತ್ತಷ್ಟು ಪರಿಣಾಮಕಾರಿ ಕ್ರಮ ಕೈಗೊಳ್ಳಲು ಮುಂದಾಗಿರುವ ಕೇಂದ್ರದ ಆರೋಗ್ಯ ಸಚಿವಾಲಯ, ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು (ಜಗಿಯುವ ಹಾಗೂ ಸೇದುವ) ನಿಷೇಧ ಮಾಡಬೇಕೆಂದು ಎಲ್ಲ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಬಿಹಾರ, ಜಾರ್ಖಂಡ್, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ್, ಮಹಾರಾಷ್ಟ್ರ, ಹರಿಯಾಣ, ನಾಗಾಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳು ಈಗಾಗಲೇ ಕೇಂದ್ರದ ಮಾರ್ಗಸೂಚಿಯನ್ನು ಪಾಲಿಸಲು ಮುಂದಾಗಿವೆ.

ಭಾರತದಲ್ಲಿ ತಂಬಾಕು ಸೇವಿಸುವವರ ಸಂಖ್ಯೆ ಅಗಾಧವಾಗಿದೆ. ಉತ್ತರ ಪ್ರದೇಶದ ಜನಸಂಖ್ಯೆ 24 ಕೋಟಿ. ಇದರಲ್ಲಿ 5.3 ಕೋಟಿ ಜನ ಒಂದಿಲ್ಲೊಂದು ರೀತಿಯಲ್ಲಿ ತಂಬಾಕು ಸೇವಿಸುತ್ತಾರೆ ಎಂದು ಗ್ಲೋಬಲ್ ಅಡಲ್ಟ್​ ಟೊಬ್ಯಾಕೊ ಸರ್ವೆ ತಿಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಿಗರೇಟ್ ಹಾಗೂ ಬೀಡಿ ಸೇದುವವರ ಸಂಖ್ಯೆ ಕಡಿಮೆಯಾಗಿದ್ದು, ಖೈನಿ (ಶೇ. 15.9), ಗುಟ್ಕಾ (ಶೇ. 11.5), ಸುಪಾರಿ (ಶೇ. 10.2) ಹಾಗೂ ಪಾನ್ ಮಸಾಲಾ (ಶೇ. 7.2) ಸೇವಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂದು ಟಾಟಾ ಇನ್​​ಸ್ಟಿಟ್ಯೂಟ್​ ಆಫ್​ ಸೋಷಿಯಲ್​ ಸೈನ್ಸಸ್​ ನಡೆಸಿದ ಅಧ್ಯಯನದಲ್ಲಿ ತಿಳಿದುಬಂದಿದೆ.

ಜಗಿಯುವ ತಂಬಾಕಿನಿಂದ ಶ್ವಾಸಕೋಶ, ಮೇದೋಜೀರಕ ಗ್ರಂಥಿ ಹಾಗೂ ಅನ್ನನಾಳದ ಕ್ಯಾನ್ಸರ್​ ಬರುವ ಸಾಧ್ಯತೆ ಹೆಚ್ಚಾಗುತ್ತದೆ. ತಂಬಾಕು ಚಟ ಇದ್ದವರಿಗೆ ಕೋವಿಡ್​-19 ಸೋಂಕು ತಗಲುವ ಸಾಧ್ಯತೆಗಳು ಹೆಚ್ಚು ಎಂಬುದು ಸಹ ಇತ್ತೀಚೆಗೆ ತಿಳಿದಿದೆ. ಧೂಮಪಾನಿಗಳಿಗೆ ನ್ಯುಮೋನಿಯಾ ಬರುವ ಸಾಧ್ಯತೆ ಇತರರಿಗಿಂತ 14 ಪಟ್ಟು ಜಾಸ್ತಿಯಂತೆ. ತಂಬಾಕಿನಿಂದ ಇಷ್ಟೆಲ್ಲ ಹಾನಿಯಾಗುತ್ತಿರುವಾಗ ಸಂಪೂರ್ಣ ತಂಬಾಕು ನಿಷೇಧ ಯಾವಾಗ ಎಂಬ ಕೂಗು ಮತ್ತೆ ಕೇಳಿ ಬಂದಿದೆ.

ಸಾರ್ವಜನಿಕ ಆರೋಗ್ಯ ರಕ್ಷಣೆಯ ಕುರಿತು ಹದಿನೈದು ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ಸರ್ಕಾರವನ್ನು ಎಚ್ಚರಿಸಿತ್ತು. ಆದರೆ, ತಂಬಾಕು ಹಾಗೂ ಮದ್ಯದಿಂದ ಬರುವ ಆದಾಯವನ್ನು ವಿಪರೀತವಾಗಿ ಅವಲಂಬಿಸಿರುವ ರಾಜ್ಯ ಸರ್ಕಾರಗಳು ಜನರ ಆರೋಗ್ಯದ ಕಡೆಗೆ ಕಿಂಚಿತ್ತೂ ಬೆಲೆ ನೀಡಲಿಲ್ಲ. ಭಾರತದಲ್ಲಿ ಪ್ರತಿವರ್ಷ 85 ಸಾವಿರ ಪುರುಷರು ಹಾಗೂ 35 ಸಾವಿರ ಮಹಿಳೆಯರು ಬಾಯಿ ಕ್ಯಾನ್ಸರ್​ಗೆ ತುತ್ತಾಗುತ್ತಿದ್ದಾರೆ. ಇದರಲ್ಲಿ ಶೇ.90 ರಷ್ಟು ಪ್ರಕರಣಗಳು ತಂಬಾಕಿನಿಂದಲೇ ಸಂಭವಿಸುತ್ತಿವೆ ಎಂದು ಕೇಂದ್ರದ ಆರೋಗ್ಯ ಇಲಾಖೆಯ ವರದಿ ಹೇಳಿದೆ.

ಸುಪ್ರೀ ಕೋರ್ಟ್​ ಆದೇಶದ ಹಿನ್ನೆಲೆಯಲ್ಲಿ ಜಗಿಯುವ ತಂಬಾಕು ಪದಾರ್ಥಗಳಾದ ಖೈನಿ, ಜರ್ದಾ ಹಾಗೂ ಗುಟ್ಕಾಗಳನ್ನು ರಾಜ್ಯ ಸರ್ಕಾರಗಳು ನಿಷೇಧಿಸಿವೆ. ಆದರೆ, ಈ ನಿಷೇಧ ಆದೇಶ ಕಾಗದದಲ್ಲಿ ಮಾತ್ರ ಜಾರಿಯಾಗಿದ್ದು ದುರ್ದೈವ.

ತಂಬಾಕು ಚಟ ಭಾರತದಲ್ಲಿ ಎಲ್ಲೆ ಮೀರಿದ್ದು ಲಾಕ್​ಡೌನ್​ ಸಮಯದಲ್ಲಿ ಡ್ರೋನ್ ಮೂಲಕ ತಂಬಾಕು ಪದಾರ್ಥಗಳನ್ನು ತರಿಸಿಕೊಳ್ಳುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ತಂಬಾಕು ಉತ್ಪನ್ನಗಳ ತಯಾರಿಕೆಗೆ ಕಾನ್ಪುರ ಕೇಂದ್ರ ಸ್ಥಾನವಾಗಿದ್ದು, ಇಲ್ಲಿಂದ 100 ಕ್ಕೂ ಅಧಿಕ ಬ್ರ್ಯಾಂಡ್​ ಗುಟ್ಕಾ ವಿವಿಧ ರಾಜ್ಯಗಳಿಗೆ ರವಾನೆಯಾಗುತ್ತವೆ. ಲಾಕ್​ಡೌನ್​ ಸಮಯದಲ್ಲಿ ಮಾತ್ರ ತಂಬಾಕು ನಿಷೇಧಿಸುವಂಥ ತಾತ್ಕಾಲಿಕ ಕ್ರಮಗಳಿಂದ ಯಾವುದೇ ಲಾಭವಿಲ್ಲ. ದೇಶಾದ್ಯಂತ ತಂಬಾಕು ಬೆಳೆಯನ್ನೇ ನಿಷೇಧಿಸುವ ದಿಟ್ಟ ಹಾಗೂ ಪರಿಣಾಮಕಾರಿ ಕ್ರಮ ಕೈಗೊಳ್ಳುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ.

ABOUT THE AUTHOR

...view details