ನವದೆಹಲಿ: ಕೊರೊನಾ ಕಾರಣದಿಂದಾಗಿ ವಿದೇಶಗಳಿಗೆ ವಿಮಾನ ಸಂಚಾರ ಬಂದ್ ಆಗಿದ್ದು, ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ವಂದೇ ಭಾರತ್ ಯೋಜನೆಯಡಿ ವಿಮಾನಗಳಲ್ಲಿ ಮತ್ತು ವಾಯುಸಾರಿಗೆ ಬಬಲ್ ವ್ಯವಸ್ಥೆಯಡಿ ಪ್ರಯಾಣಿಸಲು ಭಾರತ ಸರ್ಕಾರ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನಗಳನ್ನು ಪ್ರಕಟಿಸಿದೆ. ನಾಗರಿಕ ವಿಮಾನಯಾನ ಸಚಿವಾಲಯದ ಮಾರ್ಗಸೂಚಿಗಳ ಪ್ರಕಾರ, ಪ್ರಯಾಣ ವೆಚ್ಚವನ್ನು ಆಯಾ ಪ್ರಯಾಣಿಕರು ಭರಿಸಬೇಕಿದೆ.
ವಿದೇಶದಿಂದ ಸ್ವದೇಶಕ್ಕೆ ಮರಳಲು ಅಥವಾ ಇಲ್ಲಿಂದ ವಿದೇಶಕ್ಕೆ ತೆರಳಲು ಬೋರ್ಡಿಂಗ್ ಸಮಯದಲ್ಲಿ ಎಲ್ಲಾ ಪ್ರಯಾಣಿಕರು ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡುವುದು ಕಡ್ಡಾಯವಾಗಿರುತ್ತದೆ. ಈ ವೇಳೆ ಕೊರೊನಾ ರೋಗದ ಲಕ್ಷಣ ರಹಿತ ಪ್ರಯಾಣಿಕರನ್ನು ಮಾತ್ರ ವಿಮಾನದಲ್ಲಿ ಪ್ರಯಾಣಿಸಲು ಅನುಮತಿಸಲಾಗುವುದು ಎಂದು ಸರ್ಕಾರ ಹೇಳಿದೆ. ನಾಗರಿಕ ವಿಮಾನಯಾನ ಸಚಿವಾಲಯವು ತನ್ನ ವೆಬ್‌ಸೈಟ್‌ನಲ್ಲಿ ಭಾರತದಿಂದ ತೆರಳುವ ಅರ್ಹ ವ್ಯಕ್ತಿಗಳು ನಾಗರಿಕ ವಿಮಾನಯಾನ ಸಂಸ್ಥೆ ಅಥವಾ ಗೊತ್ತುಪಡಿಸಿದ ಏಜೆನ್ಸಿಗೆ ಅವರ ಅಗತ್ಯ ವಿವರಗಳೊಂದಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದೆ.
ನಾಗರಿಕ ವಿಮಾನಯಾನ ಸಚಿವಾಲಯವು ಅನುಮತಿಸಿದಂತೆ ಪ್ರಯಾಣಿಸಲು ಮುಖಗವಸು ಧರಿಸುವುದು, ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳುವುದು ಸೇರಿದಂತೆ ಇತ್ಯಾದಿ ಮುನ್ನೆಚ್ಚರಿಕಾ ಕ್ರಮಗಳನ್ನು ಸಿಬ್ಬಂದಿ ಮತ್ತು ಎಲ್ಲಾ ಪ್ರಯಾಣಿಕರು ಅನುಸರಿಸಬೇಕು ಎಂದು ಸೂಚಿಸಿದೆ.
ವಿದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರಿಗೆ ಕೇಂದ್ರ ಗೃಹ ಸಚಿವಾಲಯ ಅನುಮತಿಸುತ್ತದೆ. ವಂದೇ ಭಾರತ್ ಯೋಜನೆಯಡಿ ವಿಮಾನಗಳ ಪ್ರಯಾಣಿಕರು ವಿದೇಶದಲ್ಲಿನ ಭಾರತೀಯ ರಾಯಭಾರ ಸಂಸ್ಥೆಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು. ವಾಯುಸಾರಿಗೆ ಬಬಲ್ ವ್ಯವಸ್ಥೆಗೆ ಅಂತಹ ನೋಂದಣಿ ಅಗತ್ಯವಿಲ್ಲ. ಅವರು ಸರ್ಕಾರವು ಅನುಮತಿಸದ ನಿಗದಿತ ವಾಣಿಜ್ಯ ವಿಮಾನಗಳು ಅಥವಾ ಹಡಗುಗಳ ಮೂಲಕ ಪ್ರಯಾಣಿಸುತ್ತಾರೆ ಎಂದು ಮಾರ್ಗಸೂಚಿ ತಿಳಿಸಿದೆ.