ನವದೆಹಲಿ: ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯದ ತೀರ್ಪಿನ ಬಗ್ಗೆ ಪಾಕಿಸ್ತಾನ ಮಾಡಿದ ಟೀಕೆಗಳನ್ನು ಭಾರತ ತಿರಸ್ಕರಿಸಿದೆ.
'ದಬ್ಬಾಳಿಕೆಯ ವ್ಯವಸ್ಥೆ'ಯನ್ನು ಹೊಂದಿರುವ ನೆರೆಯ ದೇಶಕ್ಕೆ ಪ್ರಜಾಪ್ರಭುತ್ವದ ನೀತಿ ಮತ್ತು ಕಾನೂನಿನ ನಿಯಮಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಬಹುದು ಎಂದು ಹೇಳಿದೆ.
ಈ ಪ್ರಕರಣದಲ್ಲಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದನ್ನು ಪಾಕಿಸ್ತಾನ ವಿದೇಶಾಂಗ ಕಚೇರಿ ಟೀಕಿಸಿತ್ತು. ಅಲ್ಪಸಂಖ್ಯಾತರ, ವಿಶೇಷವಾಗಿ ಮುಸ್ಲಿಮರ ಮತ್ತು ಅವರ ಪೂಜಾ ಸ್ಥಳಗಳ ಸುರಕ್ಷತೆ ಮತ್ತು ರಕ್ಷಣೆಯನ್ನು ಖಚಿತಪಡಿಸಿಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿತ್ತು.
ಪಾಕಿಸ್ತಾನದ ಪ್ರಶ್ನೆಗೆ ಉತ್ತರಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, 'ಭಾರತವು ಪ್ರಬುದ್ಧ ಪ್ರಜಾಪ್ರಭುತ್ವವಾಗಿದ್ದು, ಇಲ್ಲಿ ಸರ್ಕಾರ ಮತ್ತು ಜನರು ನ್ಯಾಯಾಲಯದ ತೀರ್ಪುಗಳನ್ನು ಪಾಲಿಸುತ್ತಾರೆ ಮತ್ತು ಕಾನೂನಿನ ನಿಯಮಕ್ಕೆ ಗೌರವವನ್ನು ತೋರಿಸುತ್ತಾರೆ' ಎಂದಿದ್ದಾರೆ.
'ಅಂತಹ ಪ್ರಜಾಪ್ರಭುತ್ವದ ನೀತಿಗಳನ್ನು ಅರ್ಥ ಮಾಡಿಕೊಳ್ಳಲು ಜನರು ಮತ್ತು ನ್ಯಾಯಾಲಯಗಳನ್ನು ಇಚ್ಛೆಯಂತೆ ಮೌನಗೊಳಿಸಬಹುದಾದ ದಬ್ಬಾಳಿಕೆಯ ವ್ಯವಸ್ಥೆ ಹೊಂದಿರುವ ದೇಶಕ್ಕೆ ಕಷ್ಟವಾಗಬಹುದು' ಎಂದು ತಿರುಗೇಟು ನೀಡಿದ್ದಾರೆ.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಿಜೆಪಿ ನಾಯಕರಾದ ಎಲ್.ಕೆ.ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ ಸೇರಿದಂತೆ 32 ಜನರನ್ನು ಲಖನೌ ವಿಶೇಷ ಸಿಬಿಐ ನ್ಯಾಯಾಲಯ ಖುಲಾಸೆಗೊಳಿಸಿದೆ.