ನವದೆಹಲಿ: ಪಾಕಿಸ್ತಾನದ ಜೊತೆ ಭಾರತ ಮಾತುಕತೆಗೆ ಸಿದ್ಧವಿದೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡುತ್ತಿದ್ದು, ಈ ವರದಿ ಸುಳ್ಳು ಎಂದು ವಿದೇಶಾಂಗ ಸಚಿವ ರವೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದಿಂದ ಭಾರತಕ್ಕೆ ಅಭಿನಂದನಾ ಪತ್ರ ಬಂದಿತ್ತು. ಆ ಪತ್ರಕ್ಕೆ ಪ್ರೋಟೋಕಾಲ್ ಪ್ರಕಾರ ಉತ್ತರ ನೀಡಿದ್ದೇವೆ. ಅದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಪ್ರತಿಕ್ರಿಯೆ ನೀಡಿದ್ದರು. ಇಮ್ರಾನ್ ಖಾನ್ಗೆ ನಮ್ಮ ವಿದೇಶಾಂಗ ಇಲಾಖೆ ಉತ್ತರ ನೀಡಿದೆ.
ಉಭಯ ರಾಷ್ಟ್ರಗಳ ನಡುವಿನ ಸಹಕಾರಿ ಸಂಬಂಧದ ಸಲುವಾಗಿ ಭಯೋತ್ಪಾದನೆ ಮುಕ್ತ, ಹಿಂಸೆ ಮುಕ್ತ ವಾತಾವರಣ ನಿರ್ಮಾಣ ಮಾಡುವ ಕುರಿತು ಪತ್ರದಲ್ಲಿ ತಿಳಿಸಲಾಗಿತ್ತು. ಎಲ್ಲೂ ಕೂಡಾ ಉಭಯ ನಾಯಕರೊಂದಿಗೆ ಮಾತುಕತೆ ಕುರಿತು ಉಲ್ಲೇಖ ಇರಲಿಲ್ಲ ಎಂದು ರವೀಶ್ ಕುಮಾರ್ ತಿಳಿಸಿದ್ದಾರೆ.
ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ ಪಾಕಿಸ್ತಾನ ಕಪ್ಪುಪಟ್ಟಿಗೆ ಸೇರಿಸುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೇ ನಾವು ಏನನ್ನೂ ಹೇಳಲು ಇಷ್ಟಪಡುವುದಿಲ್ಲ. ಇದು ಸೂಕ್ಷ್ಮ ವಿಷಯ. ಎಫ್‌ಎಟಿಎಫ್ ಸದಸ್ಯರು ಯಾವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ತಿಳಿದುಕೊಂಡ ಮೇಲೆ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.