ಮೇ ತಿಂಗಳಿನಿಂದ ಪೂರ್ವ ಲಡಾಖ್ ಮತ್ತು ಉತ್ತರ ಸಿಕ್ಕಿಂನಲ್ಲಿ ಗಡಿ ಸಮಸ್ಯೆ ಉಲ್ಬಣಗೊಂಡಿದ್ದು ಭಾರತ-ಚೀನಾದ ಸಂಘರ್ಷ ಕೊನೆಯಾಗುತ್ತದೆ ಎಂಬ ಲೆಕ್ಕಾಚಾರಗಳಿಗೆ ಹಿನ್ನಡೆ ಉಂಟುಮಾಡುವಂತಹ ದಿಢೀರ್ ಬೆಳವಣಿಗೆಯೊಂದು ನಡೆದಿದೆ. 'ಕವ್ಕಾಜ್ 20'(Caucasus - 20)ನಲ್ಲಿ ಭಾಗವಹಿಸದಿರಲು ಭಾರತ ನಿರ್ಧರಿಸಿದೆ. ಚೀನಾ ಮತ್ತು ಪಾಕಿಸ್ತಾನ ಕೂಡ ಭಾಗವಹಿಸುವ ಈ ಸಮರಾಭ್ಯಾಸದ ಆತಿಥ್ಯ ವಹಿಸಿರುವುದು ರಷ್ಯಾ ಸೇನೆ. ಭೂಸೇನೆ, ನೌಕಾದಳ, ವಾಯುಪಡೆ ಹೀಗೆ ಸೇನೆಯ ಮೂರೂ ಬಲಗಳು ಇಲ್ಲಿ ಸಮರಾಭ್ಯಾಸ ನಡೆಸುತ್ತವೆ.
ರಷ್ಯಾದ ಆಸ್ತ್ರಖ್ಯಾನ್ ಪ್ರದೇಶದಲ್ಲಿ ಸೆಪ್ಟೆಂಬರ್ 15 - 27ರವರೆಗೆ ನಡೆಯಲಿರುವ ‘ಕವ್ಕಾಜ್ 20’ ಸಮರಾಭ್ಯಾಸದಲ್ಲಿ ಅಣಕು ಭಯೋತ್ಪಾದನಾ ದಾಳಿ ಮತ್ತಿತರ ಸೇನಾ ಚಟುವಟಿಕೆಗಳಲ್ಲಿ ಚೀನಾ ಮತ್ತು ಪಾಕಿಸ್ತಾನ ಸೈನಿಕರೊಂದಿಗೆ ಭಾರತೀಯ ಯೋಧರು ಕೂಡ ಭಾಗವಹಿಸುವ ನಿರೀಕ್ಷೆ ಇತ್ತು.
ಬೆಳವಣಿಗೆಯನ್ನು ದೃಢಪಡಿಸಿರುವ ಹೆಸರು ಬಹಿರಂಗಪಡಿಸಲು ಇಚ್ಛಿಸದ ಸೇನೆಯ ಉನ್ನತ ಮೂಲವೊಂದು ರಷ್ಯಾದಲ್ಲಿ ನಡೆಯಲಿರುವ ಸೇನಾ ಸಮರಾಭ್ಯಾಸ ;ಕವ್ಕಾಜ್ 20'ಗೆ ಭಾರತ ತನ್ನ ತಂಡವನ್ನು ಕಳುಹಿಸುತ್ತಿಲ್ಲ. ಈ ನಿರ್ಧಾರದ ಹಿಂದೆ ಚೀನಾ ಘಟನೆ ಮತ್ತು ಕೋವಿಡ್ 19 ಸೋಂಕು ಎರಡೂ ಕಾರಣಗಳಿವೆ ಎಂದು ತಿಳಿಸಿದೆ.
ಭಾರತದ ಈ ನಿರ್ಧಾರದಿಂದಾಗಿ ಏಷ್ಯಾದ ಎರಡು ದೈತ್ಯ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸುವ ರಷ್ಯಾದ ಯತ್ನಗಳಿಗೆ ಅಡ್ಡಿ ಉಂಟಾಗಿದೆ. ಚೀನಾ ಮತ್ತು ಭಾರತದ ಜಂಟಿ ಪಾಲ್ಗೊಳ್ಳುವಿಕೆಯಿಂದಾಗಿ ರಷ್ಯಾದ ಭೌಗೋಳಿಕ ರಾಜಕೀಯ ಕಾರ್ಯತಂತ್ರದ ಸಾಮರ್ಥ್ಯಕ್ಕೆ ಮಹತ್ವ ದೊರೆಯುತ್ತಿತ್ತು. ಜೊತೆಗೆ ಮಧ್ಯಸ್ಥಿಕೆ ವಹಿಸಲು ಅಮೆರಿಕ ವಿಫಲವಾದ ಹಿನ್ನೆಲೆಯಲ್ಲಿ ರಷ್ಯಾದ ಗರಿಮೆ ಹೆಚ್ಚುತ್ತಿತ್ತು.
ಅಮೆರಿಕ ಅಧ್ಯಕ್ಷ ಭಾರತ ಮತ್ತು ಚೀನಾ ನಡುವೆ ಮಧ್ಯಸ್ಥಿಕೆ ವಹಿಸುವುದನ್ನು ಎರಡೂ ದೇಶಗಳು ಇತ್ತೀಚೆಗೆ ತಿರಸ್ಕರಿಸಿದ್ದವು. ಭಾರತ 'ಕವ್ಕಾಜ್ 20' ಸಮರಾಭ್ಯಾಸದಲ್ಲಿ ಪಾಲ್ಗೊಂಡರೆ ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ಸೇರಿ (ಕ್ವಾಡ್) ಚೀನಾ ವಿರೋಧಿ ಗುಂಪನ್ನು ರೂಪಿಸಲು ಅಡ್ಡಿ ಉಂಟಾಗುತ್ತಿತ್ತು.