ನವದೆಹಲಿ:ಕೈಲಾಸ ಮಾನಸರೋವರ ಯಾತ್ರೆಗೆ ಹೋಗಲು ಹೊಸ ಮಾರ್ಗವನ್ನು ಇತ್ತೀಚೆಗಷ್ಟೇ ಭಾರತ ಉದ್ಘಾಟನೆ ಮಾಡಿತ್ತು. ಈ ಸಂಬಂಧ ನೇಪಾಳ ಭಾರತದ ವಿರುದ್ಧ ಗಡಿ ಉಲ್ಲಂಘನೆ ಆರೋಪ ಮಾಡಿದೆ.
ಭಾರತದ ಉತ್ತರಾಖಂಡದ ಪಿಥೋರ್ಗಢ ಜಿಲ್ಲೆ ಮತ್ತು ನೇಪಾಳದ ನಡುವೆ ಈ ರಸ್ತೆ ಇದ್ದು, ಗಡಿ ಉಲ್ಲಂಘನೆ ಆರೋಪವನ್ನು ಮಾಡಲಾಗಿದೆ. ಈ ಆರೋಪವನ್ನು ಭಾರತ ತಳ್ಳಿಹಾಕಿದೆ. ಶುಕ್ರವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಕೈಲಾಸ ಮಾನಸರೋವರ ಯಾತ್ರೆಗೆ ಹೋಗುವ ಚೀನಾ ಗಡಿಯ ಸಮೀಪದ ನೇಪಾಳ ಆಕ್ರಮಿತ ಧಾರ್ಚುಲಾ ನಡುವಿನ ರಸ್ತೆಯನ್ನು ಉದ್ಘಾಟಿಸಿದ್ದರು.
ನೇಪಾಳದ ಭೂ ಪ್ರದೇಶದ ಮೇಲೆ ಯಾವುದೇ ಚಟುವಟಿಕೆಯನ್ನು ಕೈಗೊಳ್ಳದಂತೆ ಭಾರತಕ್ಕೆ ಸೂಚಿಸಿತ್ತು. ಅಲ್ಲದೇ 1816 ರ ಸುಗಾಲಿ ಒಪ್ಪಂದದ ಪ್ರಕಾರ ಮಹಾಕಾಳಿ ನದಿಯ ಪೂರ್ವದ ಪ್ರದೇಶಗಳಾದ ಲಿಂಪಿಯಾಧುರಾ, ಕಲಾಪಣಿ ಮತ್ತು ಲಿಪು ಲೆಖ್ ಈ ಎಲ್ಲ ಪ್ರದೇಶಗಳ ಮೇಲೆ ತನ್ನ ಹಕ್ಕಿದೆ ಎಂದು ಶನಿವಾರ ನೇಪಾಳದ ವಿದೇಶಾಂಗ ಸಚಿವಾಲಯವು ಹೇಳಿದೆ.
ನೇಪಾಳ ಸರ್ಕಾರದ ಪತ್ರಿಕಾ ಪ್ರಕಟಣೆ
ನೇಪಾಳ ಸರ್ಕಾರವು ಹಿಂದೆ ಹಲವು ಬಾರಿ ಭಾರತ ಸರ್ಕಾರಕ್ಕೆ ಎಚ್ಚರಿಸಿದೆ. ಇತ್ತೀಚೆಗೆ 2019 ರ ನವೆಂಬರ್ 20 ರಂದು ಭಾರತ ಸರ್ಕಾರವನ್ನು ಉದ್ದೇಶಿಸಿ ರಾಜತಾಂತ್ರಿಕ ಟಿಪ್ಪಣಿ ಮೂಲಕ ಹೊಸ ರಾಜಕೀಯ ನಕ್ಷೆಗೆ ನೇಪಾಲ ಉತ್ತರಿಸಿದೆ" ಎಂದು ನೇಪಾಲ ವಿದೇಶಾಂಗ ಸಚಿವಾಲಯ ಹೇಳಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ, ನೇಪಾಲ ಆರೋಪಿಸಿದಂತೆ ಯಾವುದೇ ಗಡಿ ಉಲ್ಲಂಘನೆ ಆಗಿಲ್ಲ. ಉತ್ತರಾಖಂಡ ರಾಜ್ಯದ ಪಿಥೋರಗ್ರ ಜಿಲ್ಲೆಯಲ್ಲಿ ಇತ್ತೀಚೆಗೆ ಉದ್ಘಾಟನೆಯಾದ ರಸ್ತೆ ಸಂಪೂರ್ಣವಾಗಿ ಭಾರತದ ಭೂ ಪ್ರದೇಶದಲ್ಲಿದೆ ಎಂದಿದ್ದಾರೆ.