ನವದೆಹಲಿ: ಜಗತ್ತನ್ನೇ ಕಂಗಾಲು ಮಾಡಿದ ಕೊರೊನಾ ವೈರಸ್ಗೆ ಲಸಿಕೆ ಅಥವಾ ಔಷಧಿಗಳು ದೊರೆಯದಿದ್ದರೆ 2021 ರ ಚಳಿಗಾಲದ ಅಂತ್ಯದ ವೇಳೆಗೆ ಭಾರತವು ದಿನಕ್ಕೆ 2.87 ಲಕ್ಷ ಸೋಂಕಿತ ಪ್ರಕರಣಗಳು ದಾಖಲಾಗಬಹುದು ಎಂದು ಮಸಾಸುಚೆಟ್ಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಸಂಶೋಧಕರು ಎಚ್ಚರಿಸಿದ್ದಾರೆ.
ಕೊರೊನಾ ವೈರಸ್ಗೆ ಪರಿಣಾಮಕಾರಿಯಾದ ಚಿಕಿತ್ಸೆ ಅಥವಾ ವ್ಯಾಕ್ಸಿನೇಷನ್ ದೊರೆಯದಿದ್ದರೆ 2021 ರ ಡಿಸೆಂಬರ್ ವೇಳೆಗೆ 249 ಮಿಲಿಯನ್ (24.9 ಕೋಟಿ) ಕೊರೊನಾ ಪ್ರಕರಣಗಳು ಮತ್ತು 1.8 ಮಿಲಿಯನ್ (18 ಲಕ್ಷ) ಸಾವುಗಳಿಗೆ ಜಗತ್ತು ಸಾಕ್ಷಿಯಾಗಬಹುದು ಎಂದು ಸಂಶೋಧಕರಾದ ಹಜೀರ್ ರಹಮಂದಾದ್, ಟಿವೈ ಲಿಮ್ ಮತ್ತು ಜಾನ್ ಸ್ಟರ್ಮನ್ ನಡೆಸಿದ ಅಧ್ಯಯನ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಈ ಅಧ್ಯಯನದ ಪ್ರಕಾರ, 2021 ರ ಚಳಿಗಾಲದ ಕೊನೆಯಲ್ಲಿ ಪ್ರತಿನಿತ್ಯದ ಸೋಂಕಿನ ಪ್ರಮಾಣದ ಅಗ್ರ 10 ದೇಶಗಳ ಪಟ್ಟಿಯಲ್ಲಿ ಭಾರತ ಇರಲಿದ್ದು, ಯುಎಸ್, ದಕ್ಷಿಣ ಆಫ್ರಿಕಾ, ಇರಾನ್, ಇಂಡೋನೇಷ್ಯಾ, ನೈಜೀರಿಯಾ, ಟರ್ಕಿ, ಫ್ರಾನ್ಸ್ ಮತ್ತು ಜರ್ಮನಿ ದೇಶಗಳು ಇರಲಿವೆ ಎನ್ನಲಾಗಿದೆ.