ನವದೆಹಲಿ: ಕೇಂದ್ರ ವಾಣಿಜ್ಯ ಸಚಿವಾಲಯವು N-95 ಮಾಸ್ಕ್ಗಳ ರಫ್ತು ಮೇಲಿನ ನಿರ್ಬಂಧವನ್ನು ತೆರವುಗೊಳಿಸಿದ್ದು, ಎಲ್ಲಾ ವರ್ಗಗಳ ಮಾಸ್ಕ್ಗಳನ್ನು ಭಾರತದಿಂದ ರಫ್ತು ಮಾಡಬಹುದಾಗಿದೆ.
'N-95 ಮತ್ತು FFP-2 ಅಥವಾ ಅದರ ಸಮಾನತೆಯ ಮಾಸ್ಕ್ಗಳ ರಫ್ತು ನೀತಿಯನ್ನು 'ನಿರ್ಬಂಧಿತ'ದಿಂದ 'ಮುಕ್ತ' ವರ್ಗಕ್ಕೆ ತಿದ್ದುಪಡಿ ಮಾಡಲಾಗಿದ್ದು, ಎಲ್ಲಾ ರೀತಿಯ ಮಾಸ್ಕ್ಗಳನ್ನು ಮುಕ್ತವಾಗಿ ರಫ್ತು ಮಾಡಬಹುದಾಗಿದೆ' ಎಂದು ವಿದೇಶಾಂಗ ವ್ಯಾಪಾರ ನಿರ್ದೇಶನಾಲಯದ ಅಧಿಸೂಚನೆ ತಿಳಿಸಿದೆ.
ಈ ಮೊದಲು, ಕೊರೊನಾ ವೈರಸ್ ಸಾಂಕ್ರಾಮಿಕದ ಮಧ್ಯೆ ದೇಶೀಯ ಬೇಡಿಕೆಯನ್ನು ಪೂರೈಸಲು ರಫ್ತು ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.
ಮಾಸ್ಕ್ಗಳು ಮತ್ತು ಪಿಪಿಇ ಮೇಲುಡುಪುಗಳ ದೇಶೀಯ ಉತ್ಪಾದನೆಯು ಕಳೆದ ಆರು ತಿಂಗಳಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಹೀಗಾಗಿ ರಫ್ತು ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸುವಂತೆ ಉತ್ಪಾದಕರು ಸರ್ಕಾರಕ್ಕೆ ಮನವಿ ಮಾಡುತ್ತಿದ್ದರು.
ಈ ನಿರ್ಧಾರದ ಬಗ್ಗೆ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ್ದು, N-95 ಮತ್ತು FFP-2 ಮಾಸ್ಕ್ಗಳನ್ನು ಈಗ ವಿಶ್ವದಾದ್ಯಂತ ಮುಕ್ತವಾಗಿ ರಫ್ತು ಮಾಡಬಹುದು ಎಂದಿದ್ದಾರೆ.