ನವದೆಹಲಿ: ಭಾರತಕ್ಕೆ 7500 ಟನ್ ಯುರೇನಿಯಂ ಸರಬರಾಜು ಮಾಡುವುದಾಗಿ ಕಜಕಿಸ್ತಾನ ಹೇಳಿದೆ.
ವಿಶ್ವದಲ್ಲಿಯೇ 2ನೇ ಅತಿಹೆಚ್ಚು ಯುರೇನಿಯಂ ನಿಕ್ಷೇಪ ಹೊಂದಿರುವಕಜಕಿಸ್ತಾನ, ಭಾರತಕ್ಕೆ ಅತಿ ಹೆಚ್ಚು ಯುರೇನಿಯಂ ಪೂರೈಕೆ ಮಾಡುವ ರಾಷ್ಟ್ರವಾಗಿದೆ.
ಭಾರತದ ಪರಮಾಣು ಇಂಧನ ಕೊರತೆ ನೀಗಿಸಲು ವಾರ್ಷಿಕವಾಗಿ 7,500 ಟನ್ ಯುರೇನಿಯಂನ್ನು ಐದು ವರ್ಷಗಳ ಕಾಲ ಸರಬರಾಜು ಮಾಡಲುಕಜಕಿಸ್ತಾನ ಸಿದ್ಧವಿದ್ದು, ಒಪ್ಪಂದ ಕುರಿತಂತೆ ಚರ್ಚೆ ನಡೆಸಲಾಗುತ್ತದೆ ಎಂದು ಕಜಕಿಸ್ತಾನ್ ರಾಯಭಾರಿ ಸರ್ಸೆನ್ ಬಯೆಮ್ ಹೇಳಿದ್ದಾರೆ.
2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಕಜಕಿಸ್ತಾನ ಭೇಟಿಯ ಸಂದರ್ಭದಲ್ಲಿ ವಾರ್ಷಿಕವಾಗಿ 5,000 ಟನ್ ಯುರೇನಿಯಂ ಸರಬರಾಜು ಮಾಡಲು ಒಪ್ಪಂದವಾಗಿತ್ತು. ಆದರೆ, ಈ ಪ್ರಮಾಣವನ್ನು 7,500 ಟನ್ವರೆಗೆ ವಿಸ್ತರಿಸಲಾಗಿದೆ ಎಂದು ಬಯೆಮ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಮಧ್ಯ ಏಷ್ಯಾದ ಪ್ರಮುಖ ರಾಷ್ಟ್ರವಾಗಿರುವಕಜಕಿಸ್ತಾನ ಭಾರತದೊಂದಿಗೆ ಮೊದಲೇ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಂಡ ದೇಶವಾಗಿದ್ದು, 2009ರಲ್ಲಿ ಈ ಕುರಿತಂತೆ ಏರ್ಪಟ್ಟ ಒಪ್ಪಂದದಂತೆ ಭಾರತಕ್ಕೆ 3,000 ಯುರೇನಿಯಂ ಸರಬರಾಜು ಮಾಡಿತ್ತು.
ಇದೇ ವೇಳೆ ಭಾರತದೊಂದಿಗೆ ದ್ವಿಪಕ್ಷೀಯ ಸಹಕಾರಗಳ ಬಗ್ಗೆಯೂ ಪ್ರಸ್ತಾಪಿಸಿರುವ ರಾಯಭಾರಿ ಬಯೆಮ್, ನಾಗರಿಕ ಪರಮಾಣು ಸಹಕಾರದ ಜೊತೆಗೆ, ಬಾಹ್ಯಾಕಾಶ, ಶಿಕ್ಷಣ ಕ್ಷೇತ್ರದಲ್ಲಿಯೂ ಭಾರತ-ಕಜಕಿಸ್ತಾನ ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.