ನವದೆಹಲಿ: ಜಪಾನ್‌ನ ಜಲಗಡಿಯೊಳಗೆ ಚೀನಾದ ಎರಡು ಕರಾವಳಿ ಪಡೆಯ ಹಡಗುಗಳು ಒಳ ನುಸುಳಿದ್ದಕ್ಕೆ ಚೀನಾದ ವಿರುದ್ಧ ಶುಕ್ರವಾರ ಜಪಾನ್ ಕೂಡ ತೀವ್ರ ಟೀಕೆ ವ್ಯಕ್ತಪಡಿಸಿದೆ. ಸದ್ಯ ಭಾರತ ಮತ್ತು ಚೀನಾ ಮಧ್ಯೆ ನಡೆಯುತ್ತಿರುವ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತವನ್ನು ಜಪಾನ್‌ನ ರಾಯಭಾರಿ ಸತೋಶಿ ಸುಜುಕಿ ಬೆಂಬಲಿಸಿದ್ದಾರೆ.
ವಿವೇಕಾನಂದ ಫೌಂಡೇಶನ್ ಹಮ್ಮಿಕೊಂಡಿದ್ದ “ಕೋವಿಡ್ ನಂತರದ ಕಾಲದಲ್ಲಿ ಭಾರತ-ಜಪಾನ್ ಸಂಬಂಧಗಳು” ಎಂಬ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಅವರು, ಲಡಾಖ್‌ನಲ್ಲಿ ಚೀನಾ ಜೊತೆಗೆ ಹಂಚಿಕೊಂಡಿರುವ ವಾಸ್ತವ ಗಡಿ ರೇಖೆಯಲ್ಲಿ ಯಾವುದೇ ಬದಲಾವಣೆಯ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಅವರಿಗೆ ತಿಳಿಸಿದ್ದಾರೆ. “ಎಫ್‌ಎಸ್ ಶ್ರಿಂಗ್ಲಾ ಜೊತೆಗೆ ಉತ್ತಮ ಮಾತುಕತೆ ನಡೆಸಿದ್ದೇವೆ” ಎಂದು ಚರ್ಚೆಯ ನಂತರ ಸುಜುಕಿ ಟ್ವೀಟ್ ಮಾಡಿದ್ದಾರೆ.
“ಭಾರತ ಸರ್ಕಾರದ ಸಹನಶೀಲ ನಿಲುವು ಸೇರಿದಂತೆ ಎಲ್‌ಎಸಿಯಲ್ಲಿ ಪ್ರಸ್ತುತ ಸ್ಥಿತಿಗತಿಗಳ ಕುರಿತು ಅವರು ನೀಡಿದ ಮಾಹಿತಿ ಮೆಚ್ಚುಗೆಯಾಗಿದೆ. ಮಾತುಕತೆಯ ಮೂಲಕ ಶಾಂತಿಯುತ ಪರಿಹಾರವನ್ನು ಜಪಾನ್ ಕೂಡ ನಿರೀಕ್ಷಿಸುತ್ತದೆ. ಸದ್ಯದ ಸ್ಥಿತಿಯಲ್ಲಿ ಯಾವುದೇ ಸ್ವಯಂ ಪ್ರೇರಿತ ಬದಲಾವಣೆಯ ಪ್ರಯತ್ನವನ್ನು ಜಪಾನ್ ವಿರೋಧಿಸುತ್ತದೆ” ಎಂದು ಹೇಳಿದ್ದಾರೆ. ಕಳೆದ ತಿಂಗಳು ಲಡಾಖ್‌ನ ಗಲ್ವಾನ್ ಕಣಿವೆಯಲ್ಲಿ ಚೀನಾ ಸೇನೆಯೊಂದಿಗಿನ ಸಂಘರ್ಷದಲ್ಲಿ ಭಾರತದ 20 ಸಿಬ್ಬಂದಿ ಹುತಾತ್ಮರಾಗಿದ್ದರು. ಇದರ ನಂತರದಲ್ಲಿ, ಭಾರತ ಮತ್ತು ಚೀನಾ ರಾಜತಾಂತ್ರಿಕ ಹಾಗೂ ಸೇನಾ ಮಟ್ಟದ ಮಾತುಕತೆಯನ್ನು ನಡೆಸಿ, ಸನ್ನಿವೇಶವನ್ನು ತಹಬಂದಿಗೆ ತರುವ ಪ್ರಯತ್ನ ನಡೆಸಿದೆ.
ಪೂರ್ವ ಚೀನಾ ಸಮುದ್ರದಲ್ಲಿನ ವಿವಾದಿತ ಸೆಂಕಾಕು ದ್ವೀಪದ ಬಳಿ ಚೀನಾದ ಕರಾವಳಿ ಪಡೆಯ ಹಡಗುಗಳು ಒಳನುಸುಳಿದ್ದಕ್ಕಾಗಿ ಜಪಾನ್ ಶುಕ್ರವಾರವಷ್ಟೇ ತೀವ್ರ ಟೀಕೆ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಸುಜುಕಿ ಈ ಹೇಳಿಕೆ ನೀಡಿದ್ದಾರೆ.
ವರದಿಗಳ ಪ್ರಕಾರ, ಗುರುವಾರ ಸಂಜೆ ಸೆಂಕಾಕು ದ್ವೀಪದ (ಬೀಜಿಂಗ್ ಈ ದ್ವೀಪವನ್ನು ದಿಯಾವು ಎಂದು ಕರೆಯುತ್ತದೆ) ಬಳಿ ಎರಡು ಚೀನಾ ಹಡಗುಗಳು ಜಲಗಡಿಯನ್ನು ಉಲ್ಲಂಘಿಸಿರುವುದು ಕಂಡುಬಂದಿದೆ. ಅಷ್ಟೇ ಅಲ್ಲ, ಜಪಾನ್‌ನ ಹಡಗಿನ ಬಳಿ ಈ ಹಡಗುಗಳು ಬಂದಿದ್ದವು ಎಂದು ಹೇಳಲಾಗಿದೆ.
ಶುಕ್ರವಾರ ಟೋಕಿಯೋದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಪಾನ್‌ನ ಮುಖ್ಯ ಸಂಪುಟ ಕಾರ್ಯದರ್ಶಿ ಯೊಶಿಹಿದೆ ಸುಗಾ, ಜಪಾನ್ ಮೀನುಗಾರಿಕೆ ಹಡಗಿನ ಸಮೀಪದ ಆಗಮಿಸದಂತೆ ಚೀನಾ ಹಡಗುಗಳನ್ನು ತಡೆಯಲಾಯಿತು ಮತ್ತು ತಕ್ಷಣವೇ ಇವು ಸೆಂಕಾಕು ದ್ವೀಪದ ಸಮೀಪದಿಂದ ವಾಪಸಾದವು ಎಂದಿದ್ದಾರೆ. “ಈ ಸನ್ನಿವೇಶವನ್ನು ನಾವು ಶಾಂತಿಯುತವಾಗಿ ಮತ್ತು ಗಂಭೀರವಾಗಿ ಪರಿಹರಿಸುವ ಪ್ರಕ್ರಿಯೆ ಮುಂದುವರಿಸಿದ್ದೇವೆ” ಎಂದು ಸುಗಾ ಹೇಳಿದ್ದಾರೆ.
ಜೂನ್ 22 ರ ನಂತರ ಇದೇ ಮೊದಲ ಬಾರಿಗೆ ಚೀನಾ ಹಡಗುಗಳು ಜಪಾನ್‌ನ ಜಲಗಡಿಯನ್ನು ಉಲ್ಲಂಘಿಸಿವೆ. ಇದಕ್ಕೂ ಮೊದಲು, ನಿರಂತರವಾಗಿ 80 ದಿನಗಳವರೆಗೆ ಈ ಪ್ರದೇಶಕ್ಕೆ ಚೀನಾ ಹಡಗುಗಳನ್ನು ಕಳುಹಿಸಿತ್ತು. ಚೀನಾ ಮತ್ತು ಜಪಾನ್‌ಗಳೆರಡೂ ಈ ದ್ವೀಪ ತಮ್ಮದು ಎಂದು ಹೇಳಿಕೊಳ್ಳುತ್ತವೆಯಾದರೂ, 2012 ರಿಂದಲೂ ಟೊಕಿಯೋದ ಆಡಳಿತದಲ್ಲಿ ಈ ದ್ವೀಪ ಇದೆ. ಇದರ ವ್ಯಾಪ್ತಿಯು ಐದು ನಿರ್ಜನ ದ್ವೀಪಗಳು ಮತ್ತು 800 ಚ. ಮೀ ಇಂದ 4.32 ಚ. ಕಿ.ಮೀವರೆಗಿನ ಮೂರು ಬಂಡೆಗಲ್ಲುಗಳು ಒಳಗೊಂಡಿವೆ. ಇತ್ತೀಚಿನ ದಿನಗಳಲ್ಲಿ ಈ ವಲಯದಲ್ಲಿ ಚೀನಾ ತೋರುತ್ತಿರುವ ವಸಾಹತುಶಾಹಿ ವರ್ತನೆಯ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿದೆ.
'ಈಟಿವಿ ಭಾರತ'ದ ಜೊತೆ ಮಾತನಾಡಿದ ಅಬ್ಸರ್ವರ್ ರೀಸರ್ಚ್ ಫೌಂಡೇಶನ್‌ನ ಹಿರಿಯ ಸಂಶೋಧಕ ಮತ್ತು ಜಪಾನ್ ಅಧ್ಯಯನದಲ್ಲಿ ಪ್ರಮುಖ ಭಾರತೀಯ ಚಿಂತಕ ಕೆ.ವಿ.ಕೇಶವನ್, ಈ ವಲಯದಲ್ಲಿ ಭಾರತ ಮತ್ತು ಜಪಾನ್ ವ್ಯೂಹಾತ್ಮಕ ಪಾಲುದಾರರು ಎಂಬ ಹಿನ್ನೆಲೆಯಲ್ಲಿ ಸುಜುಕಿ ಈ ಹೇಳಿಕೆಯನ್ನು ನಾವು ವ್ಯಾಖ್ಯಾನಿಸಬಹುದಾಗಿದೆ ಎಂದಿದ್ದಾರೆ. ಚೀನಾ ಕುರಿತು ನಾವು ವಿಪಕ್ಷೀಯವಷ್ಟೇ ಅಲ್ಲ, ಇತರ ವ್ಯೂಹಗಳಲ್ಲೂ ಭಾರತ ಮತ್ತು ಜಪಾನ್ ಸಮಾನ ಮನಸ್ಕತೆಯನ್ನು ಹೊಂದಿದೆ ಎಂದು ಕೇಶವನ್ ಹೇಳಿದ್ದಾರೆ.
2017 ರಲ್ಲಿ ಭಾರತ-ಭೂತಾನ್-ಚೀನಾ ಅಂತಾರಾಷ್ಟ್ರೀಯ ಗಡಿಯಾದ ಡೋಕ್ಲಾಂನಲ್ಲಿ 73 ದಿನಗಳವರೆಗೆ ಭಾರತ ಮತ್ತು ಚೀನಾ ಯೋಧರು ಸಂಘರ್ಷಕ್ಕಿಳಿದಿದ್ದಾಗಲೂ ಭಾರತದ ಪರವಾಗಿ ಇದೇ ರೀತಿಯ ಹೇಳಿಕೆಯನ್ನು ಆಗಿನ ಜಪಾನೀಸ್ ರಾಯಭಾರಿ ಕೆಂಜಿ ಹಿರಾಮತ್ಸು ಹೇಳಿದ್ದನ್ನು ಇಲ್ಲಿ ಅವರ ನೆನಪಿಸಿದ್ದಾರೆ. ಇದು ನಮ್ಮ ಪಾಲುದಾರಿಕೆಯ ಸ್ಪಷ್ಟ ಅಭಿವ್ಯಕ್ತಿ. ಪೂರ್ವ ಚೀನಾ ಸಮುದ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆಯೂ ನಾವು ಅಷ್ಟೇ ಸಹಾನುಭೂತಿ ಹೊಂದಿದ್ದೇವೆ ಎಂದು ಕೇಶವನ್ ಹೇಳಿದ್ದಾರೆ.