ನವದೆಹಲಿ: ಇಂಗ್ಲೆಂಡ್ನಲ್ಲಿ ಹೊಸ ಪ್ರಭೇದದ ಕೋವಿಡ್ ವೈರಸ್ (ಹೊಸ ತಳಿ) ಪತ್ತೆಯಾದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಲು ಬ್ರಿಟನ್ನಿಂದ ಬರುವವರಿಗಾಗಿ ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಿದೆ.
ಕೋವಿಡ್-19 ಕಾಯಿಲೆಗೆ ಕಾರಣವಾಗುವ SARS-CoV-2 ವೈರಸ್ನ ರೂಪಾಂತರದ ಬಗ್ಗೆ ಬ್ರಿಟನ್ ಸರ್ಕಾರ ವಿಶ್ವ ಆರೋಗ್ಯ ಸಂಸ್ಥೆಗೆ (WHO) ವರದಿ ನೀಡಿದೆ. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್, ರೂಪಾಂತರಗೊಂಡ ವೈರಸ್ ಅತಿ ವೇಗವಾಗಿ ಮತ್ತು ಕಿರಿಯ ವಯಸ್ಸಿನವರ ಮೇಲೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಅಂದಾಜಿಸಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಈಗಾಗಲೇ ಇಂಗ್ಲೆಂಡ್ನಿಂದ ಭಾರತಕ್ಕೆ ಡಿಸೆಂಬರ್ 31 ರವರೆಗೆ ಅಥವಾ ಮುಂದಿನ ಆದೇಶದವರೆಗೆ ತಾತ್ಕಾಲಿಕವಾಗಿ ವಿಮಾನ ಯಾನ ಸ್ಥಗಿತಗೊಳಿಸಲಾಗಿದ್ದು, ಕೆಲ ಮಾರ್ಗಸೂಚಿಗಳನ್ನು ಇಲಾಖೆ ಬಿಡುಗಡೆ ಮಾಡಿದೆ.
ಮಾರ್ಗಸೂಚಿಗಳು ಇಂತಿವೆ:
- ಇಂಗ್ಲೆಂಡ್ನಿಂದ ಭಾರತಕ್ಕೆ ಬರುವವರನ್ನು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ
- ವರದಿ ಪಾಸಿಟಿವ್ ಬಂದಲ್ಲಿ ಸ್ಪೈಕ್ ಜೀನ್ ಆಧಾರಿತ ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಶಿಫಾರಸು ಮಾಡಲಾಗುವುದು
- ಸೋಂಕಿತರನ್ನು ಪ್ರತ್ಯೇಕ ಘಟಕದಲ್ಲಿ ಐಸೋಲೇಷನ್ನಲ್ಲಿರಿಸಲಾಗುವುದು
- ಈ ಘಟಕಗಳನ್ನು ಆಯಾ ರಾಜ್ಯಗಳ ಆರೋಗ್ಯಾಧಿಕಾರಿಗಳು ಸ್ಥಾಪಿಸುವರು
- ಸೋಂಕಿತರ ವರದಿಯು ಕೊರೊನಾ ಹೊಸ ರೂಪಾಂತರದ ಲಕ್ಷಣವನ್ನು ಸೂಚಿಸಿದರೆ ಅವರಿಗೆ ಕ್ಲಿನಿಕಲ್ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡಲಾಗುವುದು
- ಕಳೆದ ನಾಲ್ಕು ವಾರಗಳಲ್ಲಿ ಅಂದರೆ ನವೆಂಬರ್ 25 ರಿಂದ ಡಿಸೆಂಬರ್ 23 ರವರೆಗೆ ಬ್ರಿಟನ್ನಿಂದ ಭಾರತಕ್ಕೆ ಬಂದ ಪ್ರಯಾಣಿಕರ ತಪಾಸಣೆ
- ಇಂತವರನ್ನು ಆಯಾ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳು ಸಂಪರ್ಕಿಸಿ ತಪಾಸಣೆಗೊಳಪಡಿಸಬೇಕು