ನವದೆಹಲಿ:ಗಡಿಯಲ್ಲಿ ಪಾಕಿಸ್ತಾನ ತನ್ನ ಹಳೆ ಚಾಳಿಯಂತೆ ಮತ್ತೆ ಕದನ ವಿರಾಮ ಉಲ್ಲಂಘನೆಯಲ್ಲಿ ತೊಡಗಿದ್ದು, ಗಡಿ ರೇಖೆಯಲ್ಲಿ ಉದ್ಧಟತನ ಪ್ರದರ್ಶಿಸುತ್ತಿದೆ. ಈ ಹಿನ್ನೆಲೆ 2003ರ ಕದನ ವಿರಾಮ ಒಪ್ಪಂದವನ್ನು ನೆನಪಿಸಿ ವಿದೇಶಾಂಗ ಸಚಿವಾಲಯ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ.
ಪಾಕಿಸ್ತಾನ ಗಡಿರೇಖೆಯಾದ್ಯಂತ ಒಳನುಸುಳುಕೋರರಿಗೆ ಬೆಂಬಲವಾಗಿ ನಿಂತಿದ್ದು, ನಿರಂತರ ಕುಮ್ಮಕ್ಕು ನೀಡುತ್ತಿದೆ ಎಂದು ಪಾಕ್ ವಿರುದ್ಧ ಕಿಡಿಕಾರಿದೆ.
ವರ್ಚುಯಲ್ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿರುವ ವಿದೇಶಾಂಗ ವಕ್ತಾರ ಅನುರಾಗ್ ಶ್ರೀವತ್ಸ, ಗಡಿರೇಖೆಯಲ್ಲಿ ಪಾಕಿಸ್ತಾನ ಸೇನೆಯ ಬೆಂಬಲವಿಲ್ಲದೆ ಒಳನುಸುಳುಕೋರರು ಗಡಿಯಲ್ಲಿ ಇಂತಹ ಆಕ್ರಮಣ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ನಿನ್ನೆ ಬೆಳಗ್ಗೆ ಜಮ್ಮುನಿನಲ್ಲಿ ಉಗ್ರರು ನಡೆಸಿದ ದಾಳಿಯ ಬಳಿಕ ಭಾರತ ಪಾಕಿಸ್ತಾನಕ್ಕೆ ತಿರುಗೇಟು ನೀಡಿದೆ. ಇಲ್ಲಿ ನಡೆಯಲಿರುವ ಡಿಡಿಸಿ ಚುನಾವಣೆ (ಜಿಲ್ಲಾ ಅಭಿವೃದ್ಧಿ ಮಂಡಳಿ) ಗುರಿಯಾಗಿಸಿಟ್ಟುಕೊಂಡು ದೊಡ್ಡ ಮಟ್ಟದ ದಾಳಿಗೆ ಸಂಚು ರೂಪಿಸಿದ್ದರು. ಆದರೆ ನಿನ್ನೆಯ ಕಾರ್ಯಾಚರಣೆ ವೇಳೆ ನಾಲ್ವರು ಉಗ್ರರನ್ನು ಭಾರತೀಯ ಸೈನಿಕರು ಸದೆಬಡಿದಿದ್ದಾರೆ.
ನವೆಂಬರ್ 14ರಂದೇ ಸಚಿವಾಲಯವು ಪಾಕಿಸ್ತಾನದ ರಾಯಭಾರಿಗೆ ಸಮನ್ಸ್ ನೀಡಿದ್ದು, ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಬಗ್ಗೆ ತೀವ್ರ ಖಂಡನೆ ವ್ಯಕ್ತಪಸಿದ್ದೇವೆ ಎಂದು ಎಂಇಎ ವಕ್ತಾರರು ತಿಳಿಸಿದ್ದಾರೆ. ಅಲ್ಲದೆ ಪಾಕ್ ಸೇನೆಯ ನಿಯಂತ್ರಣದಲ್ಲಿರುವ ಗಡಿರೇಖೆಯಲ್ಲಿ ಭಾರತದ ವಿರುದ್ಧ ಭಯೋತ್ಪಾದನೆಗೆ ಭೂ ಪ್ರದೇಶವನ್ನು ಬಳಸಲು ಉಗ್ರರಿಗೆ ಅವಕಾಶ ನೀಡಬಾರದು. ಈ ಕುರಿತ ದ್ವಿಪಕ್ಷೀಯ ಒಪ್ಪಂದದ ಕುರಿತು ಮತ್ತೊಮ್ಮೆ ನೆನಪಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದಲ್ಲದೆ ನಿನ್ನೆ ನಡೆದ ಉಗ್ರರ ದಾಳಿಯನ್ನು ಹೊರತುಪಿಡಿಸಿ 2020ರಲ್ಲಿ 4,137ಕ್ಕೂ ಹೆಚ್ಚು ಬಾರಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿರುವುದು ವರದಿಯಾಗಿದೆ. ಅಲ್ಲದೆ ಇದೇ ವರ್ಷ 211ಕ್ಕೂ ಹೆಚ್ಚು ಉಗ್ರರನ್ನು ಸೇನಾ ಪಡೆಗಳು ಬಲಿ ಪಡೆದಿವೆ.