ನವದೆಹಲಿ:ಭಾರತದಲ್ಲಿ ಲಂಚದ ಪ್ರಮಾಣ ಹೆಚ್ಚಿದ್ದು, ಏಷ್ಯಾದ ರಾಷ್ಟ್ರಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಬಹುತೇಕ ಮಂದಿ ವೈಯಕ್ತಿಕ ಮೊಬೈಲ್ ನಂಬರ್ಗಳನ್ನು ಬಳಸುತ್ತಿದ್ದಾರೆ ಎಂದು ಸರ್ಕಾರೇತರ ಸಂಸ್ಥೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ತನ್ನ ವರದಿಯಲ್ಲಿ ಹೇಳಿದೆ.
ಏಷ್ಯಾದ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸುವ ಸಂಸ್ಥೆಯಾದ ಜಾಗತಿಕ ಭ್ರಷ್ಟಾಚಾರ ಮಾಪಕ (ಜಿಸಿಬಿ) ಲಂಚ ಪಾವತಿಸಿದವರಲ್ಲಿ ಶೇಕಡಾ 50ರಷ್ಟು ಮಂದಿಯಲ್ಲಿ ಶೇಕಡಾ 32ರಷ್ಟು ಮಂದಿ ತಮ್ಮ ಸೇವೆಯನ್ನು ಪಡೆಯಲು ಮೊಬೈಲ್ ಅಥವಾ ಇತರ ವೈಯಕ್ತಿಕ ಸಂಪರ್ಕಗಳನ್ನು ಹೊಂದಿದ್ದಾರೆ ಎಂದು ಬಹಿರಂಗಪಡಿಸಿದೆ.
ಸಾರ್ವಜನಿಕ ಸೇವೆಗಳಲ್ಲಿ ಲಂಚದ ಪಿಡುಗು ಭಾರತವನ್ನು ಪೀಡಿಸುತ್ತಿದೆ. ಇದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕ ಸೇವೆಗಳನ್ನು ಸುಗಮಗೊಳಿಸಬೇಕು. ಲಂಚ ಮತ್ತು ಸ್ವಜನಪಕ್ಷಪಾತವನ್ನು ತಡೆಯಲು ಕಾನೂನು ಜಾರಿಗೊಳಿಸಬೇಕು. ಅಗತ್ಯ ಸಾರ್ವಜನಿಕ ಸೇವೆಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಲುಪಿಸಲು ಆನ್ಲೈನ್ ಸೇವೆಗಳನ್ನು ಬಳಸಿಕೊಳ್ಳಬೇಕೆಂದು ವರದಿ ಹೇಳಿದೆ.
ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಲು ಜನರು ಮುಂದಾಗುತ್ತಾರೆ. ಆದರೆ ಭ್ರಷ್ಟಾಚಾರದ ವಿರುದ್ಧ ಧ್ವನಿಯೆತ್ತಿದ ಶೇಕಡಾ 63ರಷ್ಟು ಮಂದಿ ಮತ್ತೆ ದುಷ್ಪರಿಣಾಮಗಳಿಗೆ ಅಥವಾ ಪ್ರತೀಕಾರಕ್ಕೆ ಒಳಗಾಗುತ್ತಾರೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಜೀವ ವೈವಿಧ್ಯ ನಾಶ ಮತ್ತು ಹವಾಮಾನ ಬದಲಾವಣೆ.. ಇದೇ ಈ ದಶಕದ ಆಪತ್ತು ..
ಲಂಚಕ್ಕೆ ಬದಲಾಗಿ ದೈಹಿಕವಾಗಿ ಬಳಸಿಕೊಳ್ಳುವುದು ಕೂಡಾ ಭಾರತ, ಮಲೇಷ್ಯಾ, ಥೈಲ್ಯಾಂಡ್, ಶ್ರೀಲಂಕಾ ಮತ್ತು ಇಂಡೋನೇಷ್ಯಾ ಸೇರಿದಂತೆ ಹಲವಾರು ದೇಶಗಳಲ್ಲಿ ನಡೆಯುತ್ತಿದೆ. ಇದನ್ನು ತಡೆಯಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ಹೇಳಿದೆ.
ಭಾರತದಲ್ಲಿ ಶೇಕಡಾ 89ರಷ್ಟು ಮಂದಿ ಸರ್ಕಾರದ ಭ್ರಷ್ಟಚಾರ ಬೃಹತ್ ಪ್ರಮಾಣದಲ್ಲಿದೆ ಎಂದು ಭಾವಿಸಿದ್ದಾರೆ. ಶೇಕಡಾ 11ರಷ್ಟು ಮಂದಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ ಎಂದು ವರದಿ ಬಹಿರಂಗಪಡಿಸಿದೆ.
ಶೇಕಡಾ 63ರಷ್ಟು ಮಂದಿ ಸರ್ಕಾರ ಭ್ರಷ್ಟಾಚಾರವನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದೂ ಶೇಕಡಾ 73ರಷ್ಟು ಮಂದಿ ಭ್ರಷ್ಟಾಚಾರ ನಿಗ್ರಹ ದಳ ಭ್ರಷ್ಟಾಚಾರದ ವಿರುದ್ಧ ಯಶಸ್ವಿಯಾಗಿ ಹೋರಾಡುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
17 ದೇಶಗಳಲ್ಲಿ 20 ಸಾವಿರ ಮಂದಿಯನ್ನು ಜಿಸಿಬಿ ಸಮೀಕ್ಷೆ ಮಾಡಿದ್ದು, ನಾಲ್ಕು ಜನರಲ್ಲಿ ಸುಮಾರು ಮೂವರು ತಮ್ಮ ದೇಶದಲ್ಲಿ ಭ್ರಷ್ಟಾಚಾರವು ಒಂದು ದೊಡ್ಡ ಸಮಸ್ಯೆ ಎಂದು ಭಾವಿಸಿದ್ದಾರೆಂದ ತಿಳಿಸಿವೆ.
ಆರೋಗ್ಯ ಸೇವೆ ಮತ್ತು ಶಿಕ್ಷಣದಂತಹ ಸಾರ್ವಜನಿಕ ಸೇವೆಗಳನ್ನು ಪ್ರವೇಶಿಸಿದ ಐದರಲ್ಲಿ ಒಬ್ಬರು ಲಂಚವನ್ನು ಪಾವತಿಸಿದ್ದಾರೆ ಎಂದು ಸಮೀಕ್ಷೆಯು ಕಂಡುಹಿಡಿದಿದೆ. ಭಾರತದ ನಂತರ, ಕಾಂಬೋಡಿಯಾ (ಶೇಕಡಾ 37), ಇಂಡೋನೇಷ್ಯಾ (ಶೇಕಡಾ 30), ದಕ್ಷಿಣ ಕೊರಿಯಾ (ಶೇಕಡಾ 10) ಮತ್ತು ನೇಪಾಳ (ಶೇಕಡಾ 12) ಲಂಚದ ಪ್ರಮಾಣವಿದ್ದು, ಜಪಾನ್ ಹಾಗೂ ಮಾಲ್ಡೀವ್ಸ್ನಲ್ಲಿ ಅತಿ ಕಡಿಮೆ ಲಂಚದ ಪ್ರಮಾಣವಿದೆ ಎಂದು ವರದಿ ಹೇಳಿದೆ.