ನವದೆಹಲಿ:ದೇಶದಲ್ಲಿ ದಿನದಿನಕ್ಕೂ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ನಿನ್ನೆ ಒಂದೇ ದಿನ 11,458 ಕೇಸ್ಗಳು ಪತ್ತೆಯಾಗಿದ್ದು, 386 ಮಂದಿ ಸೋಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ ಮೂರು ಲಕ್ಷ (3,08,993) ಗಡಿ ದಾಟಿದ್ದು, ಮೃತರ ಸಂಖ್ಯೆ 8,884ಕ್ಕೆ ಏರಿಕೆಯಾಗಿದೆ.
ಒಟ್ಟು ಸೋಂಕಿತರ ಪೈಕಿ ಒಂದೂವರೆ ಲಕ್ಷ (1,54,330) ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ. ಉಳಿದಂತೆ 1,45,779 ಕೇಸ್ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದೆಹಲಿಯಲ್ಲಿ ಸೋಂಕು, ಸಾವು ಹೆಚ್ಚಳ:
ರಾಷ್ಟ್ರ ರಾಜಧಾನಿಯಲ್ಲಿ ಕಳೆದ 12 ದಿನಗಳಲ್ಲಿ ಕೊರೊನಾ ಸೋಂಕಿನ ಪ್ರಮಾಣ ಶೇ.21 ರಷ್ಟು ಏರಿಕೆಯಾಗಿದ್ದು, ಚೇತರಿಕೆಯ ಪ್ರಮಾಣ ಶೇ.8 ರಷ್ಟು ಇಳಿಕೆಯಾಗಿದೆ. ಶುಕ್ರವಾರ ಒಂದೇ ದಿನ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, ದೆಹಲಿಯಲ್ಲಿ ಸೋಂಕಿತರ ಸಂಖ್ಯೆ 36,824ಕ್ಕೆ ಹಾಗೂ ಸಾವಿನ ಸಂಖ್ಯೆ 1,214ಕ್ಕೆ ಏರಿಕೆಯಾಗಿದೆ.
ಆಸ್ಪತ್ರೆಗಳಲ್ಲಿ 'ಕೋವಿಡ್ ರೋಗಿಗಳನ್ನು ಪ್ರಾಣಿಗಳಿಗಿಂತ ಕಡೆಯಾಗಿ ನೋಡಲಾಗುತ್ತಿದೆ' ಎಂದು ನಿನ್ನೆ ಸುಪ್ರೀಂಕೋರ್ಟ್ ದೆಹಲಿ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ ವ್ಯವಸ್ಥೆ ಕಲ್ಪಿಸಲಾಗದೆ ದೆಹಲಿಯ ಮನೆಗಳೇ ಈಗ ಐಸೋಲೇಷನ್ ವಾರ್ಡ್ಗಳಾಗುತ್ತಿವೆ.