ನವದೆಹಲಿ:ಏಷ್ಯಾ-ಪೆಸಿಫಿಕ್ ಭಾಗದಲ್ಲಿ ಕೋವಿಡ್ ಲಸಿಕೆ ಪೂರೈಸುವಲ್ಲಿ ಭಾರತ ಮತ್ತು ಚೀನಾ ದೇಶಗಳು ಮುನ್ನಡೆ ಸಾಧಿಸಲಿವೆ ಎಂದು ಮೂಡಿಸ್ ಅನಾಲಿಟಿಕ್ಸ್ ಸೋಮವಾರ ಮಾಹಿತಿ ಹೊರಹಾಕಿದೆ.
ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಆಕ್ಸ್ಫರ್ಡ್ ಜಂಟಿಯಾಗಿ ಸಂಶೋಧಿಸಿದ ಕೊವಿಶೀಲ್ಡ್ ಮತ್ತು ಭಾರತ್ ಬಯೋಟೆಕ್ನ ಕೊವ್ಯಾಕ್ಸಿನ್ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆ ನೀಡಿ ಭಾರತದ ಡಿಜಿಸಿಐ ಈ ತಿಂಗಳ ಆರಂಭದಲ್ಲಿ ಆದೇಶ ಹೊರಡಿಸಿತ್ತು.
ಇದಾದ ನಂತರ ಜನವರಿ 16ರಿಂದ ದೇಶಾದ್ಯಂತ ಲಸಿಕೆಯನ್ನು ಹಾಕುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಈ ಕಾರ್ಯಕ್ರಮ ಮುಂದುವರೆಯುತ್ತಿದೆ. ಈ ಮೂಲಕ ಆಗಸ್ಟ್ ವೇಳೆಗೆ ಆರೋಗ್ಯ ಕಾರ್ಯಕರ್ತರು, ವೃದ್ಧರು ಸೇರಿದಂತೆ ಸುಮಾರು 30 ಕೋಟಿ ಮಂದಿಗೆ ಲಸಿಕೆ ನೀಡಲು ಭಾರತ ಸರ್ಕಾರ ಮುಂದಾಗಿದೆ ಎಂದು ಅನಾಲಿಟಿಕ್ಸ್ ಹೇಳಿದೆ.
ಇದು ಪ್ರಮುಖ ಬೆಳವಣಿಗೆಯಾಗಿದ್ದು, ಅಮೆರಿಕ ನಂತರ ಭಾರತ ಅತ್ಯಂತ ಹೆಚ್ಚು ಪ್ರಭಾವ ಬೀರಬಲ್ಲ ರಾಷ್ಟ್ರವಾಗಿದೆ. ದೇಶದಲ್ಲಿನ ರೋಗ ನಿರೋಧಕ ಶಕ್ತಿಯೂ ಕೂಡಾ ಆರ್ಥಿಕ ಚೇತರಿಕೆಗೆ ಸಹಕಾರಿಯಾಗಲಿದೆ ಎಂದು ಮೂಡಿಸ್ ಸ್ಪಷ್ಟನೆ ನೀಡಿದೆ.