ನವದೆಹಲಿ :ಗಡಿಯಲ್ಲಿ ಬಿಕ್ಕಟ್ಟು ಎದುರಾಗಿದೆ. ಭಾರತದ ಆರ್ಥಿಕತೆ ತಪ್ಪು ದಾರಿ ಹಿಡಿದಿದೆ. ಕೊರೊನಾ ವೈರಸ್ನಿಂದಾಗಿ ಜನರು ಕಂಗಾಲಾಗಿದ್ದಾರೆ. ಅದಕ್ಕೆ ಕೇಂದ್ರ ಸರ್ಕಾರದ ತಪ್ಪು ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಟೀಕಿಸಿದರು.
ಮಂಗಳವಾರ ನಡೆದ ಕಾಂಗ್ರೆಸ್ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಎದುರಿಸುತ್ತಿರುವ ಸಮಸ್ಯೆಗಳಿಗೆ ಮೋದಿ ಸರ್ಕಾರದ ಆಡಳಿತ ದುರುಪಯೋಗವೇ ಕಾರಣ ಎಂದು ವಾಗ್ದಾಳಿ ನಡೆಸಿದರು. ಪ್ರಾದೇಶಿಕ ಸಮಗ್ರತೆಗೆ ಕಾಪಾಡಲು ಕೇಂದ್ರ ಉತ್ತಮ ಕ್ರಮಗಳನ್ನು ಕೈಗೊಂಡು ಪ್ರಬುದ್ಧ ರಾಜತಾಂತ್ರಿಕತೆ, ನಿರ್ಣಾಯಕ ಮತ್ತು ಸಮರ್ಥವಾಗಿ ನಿಭಾಯಿಸುತ್ತದೆ ಎಂದು ಆಶಿಸುತ್ತೇನೆ.
ಲಾಕ್ಡೌನ್ ಮತ್ತು ಕೊರೊನಾ ಸಂಕಷ್ಟ ತೊಲಗಿಸಲು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಟೊಳ್ಳು ಎಂದು ಆರೋಪಿಸಿದರು. ಪ್ಯಾಕೇಜ್ ಘೋಷಿಸುವ ಬದಲಿಗೆ ಜನರ ಕೈಗೆ ಹಣ ನೀಡಬೇಕಾಗಿತ್ತು. ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳಿಗೆ ನೆರವಾಗಬೇಕಿತ್ತು. ಬೇಡಿಕೆ ಹೆಚ್ಚಿಸುವ ಪ್ರಯತ್ನ ಮಾಡಬೇಕಿತ್ತು. ಆದರೆ, ಇದ್ಯಾವುದಕ್ಕೂ ಉಪಯೋಗಕ್ಕೆ ಬಾರದ ಪ್ಯಾಕೇಜ್ ಘೋಷಿಸಲಾಗಿದೆ. ಅದು ಹಣಕಾಸಿನ ಅಂಶವನ್ನು ಜಿಡಿಪಿಯ ಶೇ.1ಕ್ಕಿಂತ ಕಡಿಮೆ ಹೊಂದಿದೆ ಎಂದು ಟೀಕಿಸಿದರು.
ಜಾಗತಿಕ ಕಚ್ಚಾ ಬೆಲೆ ಕುಸಿದಿದ್ರೂ ಈ ಸಮಯದಲ್ಲಿ ಸತತ 17 ದಿನಗಳವರೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿಷ್ಕರುಣೆಯಿಂದ ಕೇಂದ್ರ ಸರ್ಕಾರ ಹೆಚ್ಚಿಸುತ್ತಿದೆ. ಇದರಿಂದ ಜನರ ಗಾಯದ ಮೇಲೆ ಮತ್ತೆ ಬರೆ ಎಳೆದಂತಾಗಿದೆ. ಕೊರೊನಾ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಪ್ರಶ್ನಿಸಿದ್ರೆ, ಆಶ್ವಾಸನೆ ನೀಡದೆ ಎದುರು ಮಾತನಾಡುತ್ತದೆ ಎಂದರು. ಅಧಿಕಾರವನ್ನು ಕೇಂದ್ರೀಕರಿಸಿಕೊಂರುವ ಕೇಂದ್ರ ಸರ್ಕಾರ, ರಾಜ್ಯಗಳಿಗೆ ಅಧಿಕಾರ ಮತ್ತು ಹಣ ಎರಡನ್ನೂ ನೀಡದೆ ದುರುಪಯೋಗಪಡಿಸಿಕೊಳ್ಳುತ್ತಿದೆ. ಕೊರೊನಾ ವೈರಸ್ ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ಅನೇಕ ವೈಫಲ್ಯಗಳು ಕಣ್ಣ ಮುಂದಿವೆ ಎಂದರು.