ಹೈದರಾಬಾದ್:ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯಾರೂ ಊಹಿಸದ ಕಾರ್ಯಗಳನ್ನ ಮಾಡುವ ದೇಶವನ್ನೇ ಅಚ್ಚರಿಗೊಳಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಮೊನ್ನೆ ಮೊನ್ನೆ ಜುಲೈ 3ರಂದು ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಲೇಹ್‌ಗೆ ಭೇಟಿ ನೀಡುವುದು, ಹೆಲಿಕಾಪ್ಟರ್‌ನಿಂದ ಇಳಿಯುವುದು, ಗಾಯಗೊಂಡ ಸೈನಿಕರನ್ನು ಭೇಟಿ ಮಾಡುವುದು, ಬ್ರೀಫಿಂಗ್‌ಗಳಿಗೆ ಹಾಜರಾಗುವುದು ಮತ್ತು ಯೋಧರನ್ನ ಉತ್ತೇಜಿಸುವ ಭಾಷಣ ಇವೇ ಮುಂತಾದ ಫೋಟೋಗಳು ಟಿವಿಗಳ ಪರದೆಗಳ ಮೇಲೆ ಮಿಂಚಿದ್ದು ಸಹ ಅಚ್ಚರಿಯ ಬೆಳವಣಿಗೆಗಳಿಗಿಂತ ಭಿನ್ನವಾಗಿರಲಿಲ್ಲ.
ಪೂರ್ವ ಲಡಾಖ್‌ನಲ್ಲಿ ಭಾರತೀಯ ಮತ್ತು ಚೀನಿ ಸೇನೆಗಳ ನಡುವೆ ನಡೆಯುತ್ತಿರುವ ಸಂಘರ್ಷದ ಹಿನ್ನೆಲೆ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಈ ಭೇಟಿ ಹಲವಾರು ಕಾರಣಗಳಿಂದಾಗಿ ಬಹಳಷ್ಟು ಗಮನಾರ್ಹವಾಗಿದೆ. ಸಂಘರ್ಷದ ಸ್ಥಳಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭೇಟಿ ಬಿಕ್ಕಟ್ಟಿನ ಗಂಭೀರತೆ ಬಗ್ಗೆ ಅರಿತಿರುವ ಸರ್ಕಾರ ಹೆಚ್ಚು ಒತ್ತು ಕೊಡುತ್ತಿರುವುದು ಸ್ಪಷ್ಟವಾಗಿದೆ. ಗಡಿ ವಿವಾದವನ್ನ ಸರ್ಕಾರ ಲಘುವಾಗಿ ಪರಿಗಣಿಸಿದ ಹಾಗೆ ಕಾಣುತ್ತಿದೆ. ಮಿಲಿಟರಿ ಮಟ್ಟದ ಮಾತುಕತೆ ಮೂಲಕ ಒಂದು ನಿರ್ಣಯ ಹೊರ ಬೀಳಬಹುದು ಎಂಬ ಮಾತು ಕೇಳಿ ಬರುತ್ತಿದ್ದವು. ಆದರೆ, ಜೂನ್ 15ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ರಕ್ತ ಸಿಕ್ತ ಸಂಘರ್ಷವು ಆ ಎಲ್ಲ ನಂಬಿಕೆಗಳನ್ನ ನುಚ್ಚು ನೂರು ಮಾಡಿದೆ.
ಪ್ರಸ್ತುತ ಚೀನಾ ಕೈಗೊಳ್ಳುತ್ತಿರುವ ಹಲವು ಕ್ರಮಗಳು ಈ ಹಿಂದೆ ಎರಡೂ ದೇಶಗಳು ಪರಸ್ಪರ ತೃಪ್ತಿಗೆ ಶಾಂತಿಯುತವಾಗಿ ಗಡಿ ಸಂಘರ್ಷವನ್ನ ಪರಿಹರಿಸಿಕೊಳ್ಳಬೇಕೆಂದು ಮಾಡಿಕೊಂಡಿದ್ದ ಹಿಂದಿನ ನಿಲುವುಗಳಿಗಿಂತ ಸಂಪೂರ್ಣ ಭಿನ್ನವಾಗಿವೆ ಎಂದು ಸ್ಪಷ್ಟವಾಗಿ ನಾನು ಭಾವಿಸುತ್ತೇನೆ. ಕಳೆದ ಎರಡು ತಿಂಗಳುಗಳಿಂದ, ಚೀನಾದ ವಿದೇಶಾಂಗ ಸಚಿವಾಲಯವು "ಸಾಧ್ಯವಾದಷ್ಟು ಬೇಗ ಗಡಿಯಲ್ಲಿ ನೆಲೆಯಾಗಿರುವ ಸೇನೆ ಹಿಂಪಡೆದು ಉದ್ವಿಗ್ನತೆಯನ್ನು ತಗ್ಗಿಸಿ, ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವ" ಬಗ್ಗೆ ಮಾತನಾಡುತ್ತಿದೆ. ಆದರೆ, ಹೇಗಾದರೂ ಮಾಡಿ, ಅವರು ಗಾಲ್ವಾನ್ ಕಣಿವೆಯ ಮೇಲೆ ಅಸಮರ್ಥನೀಯ ಹಕ್ಕುಗಳನ್ನು ಸಾಧಿಸಲು ಚೀನಾ ಸೇನೆ ಹಿಂಜರಿಯಲಿಲ್ಲ. ಭಾರತದ ಪ್ರದೇಶ ಎಂದು ಪರಿಗಣಿಸುವ ಪ್ರದೇಶಗಳಲ್ಲಿ ತಮ್ಮ ಮಿಲಿಟರಿ ಪಡೆಗಳನ್ನು ನಿರಂತರವಾಗಿ ಬಲಪಡಿಸುವಲ್ಲಿ ನಿರತವಾಗಿದೆ.
ಸದ್ಯ, ನಡೆಯುತ್ತಿರುವ ಮಾತುಕತೆ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷವು ಭಾರತಕ್ಕೆ ಸ್ವೀಕಾರರ್ಹವಲ್ಲ ಎಂಬುದು ಪ್ರಧಾನಮಂತ್ರಿ ಮೋದಿಯ ಈ ಲಡಾಖ್ ಭೇಟಿಯಿಂದ ಸ್ಪಷ್ಟವಾಗಿದೆ. ಅವರ ಪ್ರವಾಸವು ಚೀನಾ ಸರ್ಕಾರದ ಕಡೆಯಿಂದ ಪ್ರತಿಕ್ರಿಯೆ ಉಂಟು ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ತಿಳಿದಿತ್ತು. ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರರು, "ಯಾವುದೇ ಕಡೆಯಿಂದಲೂ ಈ ಹಂತದಲ್ಲಿ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಯಾವುದೇ ಕ್ರಮದಲ್ಲಿ ತೊಡಗಬಾರದು" ಎಂದು ಈಗ ಹೇಳಿದ್ದಾರೆ. ಪ್ರಧಾನಿ ಮೋದಿಯ ಈ ಭೇಟಿ ಮೂಲಕ, ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ (ಎಲ್‌ಎಸಿ) ಉಲ್ಬಣಗೊಳ್ಳುತ್ತಿರುವ ಸಂಘರ್ಷವು ಸ್ಥಗಿತಗೊಳ್ಳುವುದು ಸೂಕ್ತ ಎಂಬ ಸ್ಪಷ್ಟ ಸೂಚನೆ ಆಗಿದೆ.
ಲಡಾಖ್ ಭೇಟಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಭಾಷಣ ನೇರ ಮತ್ತು ಅತ್ಯಂತ ಕಠಿಣವಾಗಿತ್ತು. ಇದು ʻಚೀನಾದ ವಿಸ್ತರಣಾವಾದʼ ಎಂದು ಕರೆದ ಅವರು, "ವಿಸ್ತರಣಾವಾದಿ ಶಕ್ತಿಗಳು ಅಳಿಸಿ ಹೋಗಿವೆ ಅಥವಾ ತಮ್ಮ ನಿರ್ಧಾರ ಹಿಂಪಡೆದಿವೆ ಎಂಬುದಕ್ಕೆ ಇತಿಹಾಸವು ಸಾಕ್ಷಿಯಾಗಿದೆ" ಎಂದು ಹೇಳುವ ಮೂಲಕ ಚೀನಾಕ್ಕೆ ಸ್ಪಷ್ಟ ಸಂದೇಶ ರವಾನಿಸಿದರು. "ದುರ್ಬಲರು ಎಂದಿಗೂ ಶಾಂತಿಯನ್ನು ಪ್ರಾರಂಭಿಸಲು ಸಾಧ್ಯವಿಲ್ಲ" ಎಂದು ಪ್ರಧಾನಿ ಮೋದಿ ಹೇಳಿದ್ದು, ದೌರ್ಬಲ್ಯದ ಸ್ಥಾನದಿಂದ ಭಾರತ ಮಾತುಕತೆ ನಡೆಸುವುದಿಲ್ಲ ಎಂಬುದರ ಸಂಕೇತವಾಗಿತ್ತು.