ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆ ಮುಸ್ಲಿಂ ವಿರೋಧಿ ಅಲ್ಲ. ಐತಿಹಾಸಿಕ ಪ್ರಮಾದವನ್ನು ಸರಿಪಡಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಸೂದೆಯ ಬಗೆಗಿನ ವಿಪಕ್ಷಗಳ ಟೀಕಾ ಪ್ರಹಾರಕ್ಕೆ ಉತ್ತರಿಸುತ್ತಾ ಹೋದರು.
ಪೌರತ್ವ ತಿದ್ದುಪಡಿ ಮಸೂದೆಗೆ ಅಂಗೀಕಾರದ ಚರ್ಚೆಯಲ್ಲಿ ಪಾಲ್ಗೊಂಡು ಸಮಾಜವಾದಿ ಪಕ್ಷದ ಸಂಸದ ಜಾವೇದ್ ಅಲಿ ಖಾನ್, ಮುಸ್ಲಿಂ ಮುಕ್ತ ದೇಶವನ್ನಾಗಿಸುವ ಮಸೂದೆ ಇದಾಗಿದೆ. ಇದೊಂದು ಹುನ್ನಾರ ಎಂಬ ಗಂಭೀರ ಆರೋಪ ಮಾಡಿದ್ರು.ಇದಕ್ಕೆ ತಿರುಗೇಟು ನೀಡಿದ ಅಮಿತ್ ಶಾ, ನೀವು ಬಯಸಿದರೂ ಭಾರತ ಎಂದಿಗೂ ಮುಸ್ಲಿಮರಿಂದ ಮುಕ್ತ ಆಗುವುದಿಲ್ಲ ಎಂದರು.
ಈ ಮಸೂದೆಯಿಂದಾಗಿ ಮುಸ್ಲೀಮರ ಪೌರತ್ವಕ್ಕೆ ಯಾವುದೇ ತೊಂದರೆ ಇಲ್ಲ. ಯಾವುದೇ ಕಾರಣಕ್ಕೂ ದೇಶದಲ್ಲಿ ಮುಸ್ಲೀಮರು ಭಯ ಪಡುವ ಅಗತ್ಯವಿಲ್ಲ. ಈ ಮಸೂದೆ ಮುಸ್ಲೀಮರಲ್ಲಿ ಭಯದ ವಾತಾವರಣ ಮೂಡಿಸುವಂಥದ್ದು ಎಂದಿದ್ದ ಕಾಂಗ್ರೆಸ್ ಸಂಸದ ಕಪಿಲ್ ಸಿಬಲ್ ಹೇಳಿಕೆಗೆ ಶಾ ಸ್ಪಷ್ಟನೆ ನೀಡಿದ್ರು.
ಈ ಮಸೂದೆ ಮುಸ್ಲಿಮರ ಹಿತಾಸಕ್ತಿಗೆ ವಿರುದ್ಧವಲ್ಲ. ಮುಸ್ಲೀಮರ ಪೌರತ್ವಕ್ಕೆ ಇದ್ರಿಂದ ಧಕ್ಕೆ ಬರುವುದಿಲ್ಲ. ಇದೇನಿದ್ದರೂ ಅಕ್ರಮ ವಲಸಿಗರ ವಿರುದ್ಧವಾಗಿದೆ. ಹಿಂದೆ ನಡೆದಿರುವ ಐತಿಹಾಸಿಕ ಪ್ರಮಾದವನ್ನು ಇಂದು ಸರಿಪಡಿಸಲಾಗಿದೆ. ನೆರೆಯ ಇಸ್ಲಾಮಿಕ್ ದೇಶಗಳಾದ ಬಾಂಗ್ಲಾ, ಪಾಕಿಸ್ತಾನ ಹಾಗು ಅಫ್ಘಾನಿಸ್ತಾನ ದೇಶಗಳಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗುತ್ತಿದ್ದ ಮುಸ್ಲೀಮೇತರ ಜನರು ಇಂದು ಸ್ವಾತಂತ್ರ್ಯರಾಗಲಿದ್ದಾರೆ ಎಂದು ಹೇಳಿದ್ರು.
2014ರ ಡಿಸೆಂಬರ್ 31ರ ಮೊದಲು ಭಾರತದಲ್ಲಿ ನೆಲೆಸಿದ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ ಮುಸ್ಲಿಮೇತರರಿಗೆ ಗೌರವಾನ್ವಿತ ಜೀವನವನ್ನು ನೀಡಲು ಈ ಮಸೂದೆಯನ್ನು ತರಲಾಗಿದೆ ಎಂದು ಅಮಿತ್ ಶಾ ವಿವರಿಸಿದ್ರು.