ನವದೆಹಲಿ: ಈದ್ ಅನ್ನು ಸರಳತೆಯಿಂದ ಆಚರಿಸಿ, ನಿಮ್ಮ ನೆರೆಹೊರೆಯವರಿಗೆ ಸಹಾಯ ಮಾಡಿ ಮತ್ತು ಹಸಿದವರಿಗೆ ಆಹಾರವನ್ನು ನೀಡಿ. ಇದು ರಾಷ್ಟ್ರ ರಾಜಧಾನಿಯಲ್ಲಿನ ಈದ್ ಉಲ್-ಫಿತರ್ ಸಂದೇಶವಾಗಿದೆ.
ಈದ್ ಹಬ್ಬದ ಸಂಭ್ರಮಕ್ಕೆ ಪ್ರಧಾನಿ ಮೋದಿ ಶುಭ ಕೋರಿದ್ದಾರೆ. "ಈದ್-ಉಲ್-ಫಿತರ್ ಶುಭಾಶಯಗಳು, ಈ ವಿಶೇಷ ಸಂದರ್ಭವು ಸಹಾನುಭೂತಿ, ಸಹೋದರತ್ವ ಮತ್ತು ಸಾಮರಸ್ಯದ ಮನೋಭಾವವನ್ನು ಮತ್ತಷ್ಟು ಹೆಚ್ಚಿಸಲಿ. ಎಲ್ಲರೂ ಆರೋಗ್ಯ ಮತ್ತು ಸಮೃದ್ಧರಾಗಿರಲಿ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ರಾಷ್ಟ್ರವ್ಯಾಪಿ ಲಾಕ್ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸಭೆ ಸಮಾರಂಭಗಳನ್ನು ನಿಷೇಧಿಸಲಾಗಿದೆ. ಎಲ್ಲಾ ಧಾರ್ಮಿಕ ಸ್ಥಳಗಳನ್ನು ಮುಚ್ಚಲಾಗಿದ್ದು, ಮನೆಯಲ್ಲೇ ಈದ್ ಹಬ್ಬವನ್ನು ಆಚರಿಸುವಂತೆ ಎಲ್ಲಾ ಧಾರ್ಮಿಕ ಮುಖಂಡರು ಕೇಳಿಕೊಂಡಿದ್ದಾರೆ.
ಈದ್ ಎಂದರೆ ಸಂತೋಷ ಎಂದು ಅಖಿಲ ಭಾರತ ಇಮಾಮ್ ಸಂಘಟನೆಯ (ಎಐಐಒ) ಮುಖ್ಯ ಇಮಾಮ್ ಉಮರ್ ಅಹ್ಮದ್ ಇಲ್ಯಾಸಿ ಹೇಳಿದ್ದಾರೆ. 'ಇತರರು ಸಂತೋಷವಾಗಿರುವಾಗ ಮಾತ್ರ ಸಂತೋಷ ಸಾಧ್ಯ. ನಾವು ಹಿಂದೆಂದೂ ಕಂಡಿರದ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಹೊಸ ಬಟ್ಟೆ ಖರೀದಿಸುವುದನ್ನು ನಾನು ವಿರೋಧಿಸಿತ್ತೇನೆ. ಮನೆಯಲ್ಲಿ ಇದ್ದು ಈದ್ ಹಬ್ಬ ಆಚರಿಸಿ' ಎಂದು ಹೇಳಿದ್ದಾರೆ.
ಪ್ರತಿವರ್ಷ ದೆಹಲಿಯ ಜಾಮಾ ಮಸೀದಿ ಬಳಿ ಸಾವಿರಾರು ಜನ ನಮಾಜ್ ಮಾಡುವ ದೃಶ್ಯ ಕಂಡುಬರುತ್ತಿತ್ತು. ಆದರೆ, ಈ ವರ್ಷ ಮಸೀದಿಯ ವಿಶಾಲ ಅಂಗಳವು ಖಾಲಿಯಾಗಿ ಉಳಿದಿದೆ.
ಸಾಂಕ್ರಾಮಿಕ ರೋಗದಿಂದಾಗಿ ಮೊದಲ ಬಾರಿಗೆ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಈದ್ ಹಬ್ಬ ಆಚರಿಸುತ್ತಿದ್ದೇನೆ. ಅದು ಹಬ್ಬದ ವಾತಾವರಣದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಟ್ವೀಟ್ ಮಾಡಿದ್ದಾರೆ.